ಜುಲೈ 23 ರಿಂದ ಬಲ ಹಾಗೂ ಎಡ ನಾಲೆಗಳಿಗೆ ಭದ್ರಾ ನೀರು : ಭದ್ರಾ ಮೇಲ್ದಂಡೆಗೆ ನೀರು ಹರಿಸೋದಿಲ್ಲ – ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ

ದಾವಣಗೆರೆ: ಭದ್ರಾ ಜಲಾಶಯದಲ್ಲಿ ಈ ಭಾಗದ ಬೆಳೆಗಳಿಗೆ ಮತ್ತು ಕುಡಿಯುವ ನೀರು, ಕೈಗಾರಿಕೆಗೆ ಸಾಕಾಗುವಷ್ಟು ಮಾತ್ರ ನೀರಿರುವುದರಿಂದ ಭದ್ರಾ ಮೇಲ್ದಂಡೆಗೆ ನೀರು ಹರಿಸದಿರಲು ಇಂದು ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭದ್ರಾ ಮೇಲ್ದಂಡೆಗೆ 12.50 ಟಿಎಂಸಿ ನೀರು ಬಿಡಲು ಸರ್ಕಾರ ಆದೇಶಿಸಿತ್ತು. ಆದರೆ, ಇದರಿಂದ ಈ ಭಾಗದ ರೈತರ ಬೆಳೆಗೆ ನೀರು ಸಿಗದಂತಾಗುತ್ತದೆ. ಭದ್ರದಲ್ಲಿ ಒಳಹರಿವಿನ ಪ್ರಮಾಣ ಇಲ್ಲದೇ ಇರುವುದರಿಂದ ಅಪ್ಪರ್ ಭದ್ರಾಕ್ಕೆ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದರು.
ಭದ್ರಾ ಜಲಾಶಯದ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲ ಮತ್ತು ಎಡದಂಡೆ ಕಾಲುವೆಗಳು ಹಾಗೂ ಶಾಖಾ ನಾಲೆಗಳಿಗೆ ಜು.23 ರ ಮಧ್ಯರಾತ್ರಿಯಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ತಿಳಿಸಿದರು.
ನೀರಾವರಿ ಸಲಹಾ ಸಮಿತಿಯ ಸರ್ವ ಸದಸ್ಯರು ಹಾಗೂ ರೈತರೊಂದಿಗೆ ಚರ್ಚೆ ನಡೆಸಿ ಒಮ್ಮತದಿಂದ ಜುಲೈ 23 ರಿಂದ ಭದ್ರಾ ಬಲದಂಡೆ, ಎಡದಂಡೆ ನಾಲೆ, ಆನವೇರಿ, ದಾವಣಗೆರೆ , ಮಲೆಬೆನ್ನೂರು ಮತ್ತು ಹರಿಹರ ಶಾಖಾನಾಲೆಗಳಲ್ಲಿ ನೀರು ಹರಿಸಲು ನಿರ್ಧಾರ ಕೈಗೊಂಡಿದ್ದೇವೆ ಎಂದರು.
ಜುಲೈ 14 ರಂದು ಜಲಾಶಯದಲ್ಲಿ 157 ಅಡಿ 4 ಇಂಚುಗಳಷ್ಟು ನೀರು ಸಂಗ್ರಹವಿದ್ದು, ಈ ಮಟ್ಟಕ್ಕೆ ನೀರಿನ ಸಂಗ್ರಹಣೆ 40.484 ಟಿಎಂಸಿ ಇದೆ. ಇದರಲ್ಲಿ 8.50 ಟಿ.ಎಂ.ಸಿ ಬಳಕೆಗೆ ಬಾರದ (ಡೆಡ್ ಸ್ಟೋರೇಜ್) ಪ್ರಮಾಣವಾಗಿದ್ದು, 26.652 ಟಿಎಂಸಿ ಬಳಕೆಗೆ ಬರುವ ನೀರಿನ ಪ್ರಮಾಣವಾಗಿದೆ. ಭದ್ರಾ ಬಲದಂಡೆ ಕಾಲುವೆಗೆ ಪ್ರತಿದಿನ ಸರಾಸರಿ 3050 ಕ್ಯೂಸೆಕ್ಸ್ ಮತ್ತು ಭದ್ರಾ ಎಡದಂಡೆ ಕಾಲುವೆಗೆ 490 ಒಟ್ಟು 3540 ಕ್ಯೂಸೆಕ್ಸ್ ಬೇಡಿಕೆ ಇದೆ ಎಂದರು.
ಮುಂಗಾರು ಹಂಗಾಮಿಗೆ ಅವಶ್ಯವಿರುವ ನೀರಿನ ವಿವರಣೆ : ಪ್ರಸ್ತುತ ಜಲಾಶಯದಲ್ಲಿ ಬಳಕೆಗೆ 26.652 ಟಿಎಂಸಿ ನೀರು ಲಭ್ಯವಿದ್ದು ಅವಧಿಗೆ 49.13 ಟಿಎಂಸಿ ನೀರು ಆವಶ್ಯಕತೆ ಇದೆ . ಜುಲೈ ರಂದು ಕೊರತೆಯಿರುವ ನೀರಿನ ಪ್ರಮಾಣ 22.478 ಟಿಎಂಸಿ ಆಗಿದ್ದು, ಈ ಪ್ರಮಾಣದ ಆಧಾರದಲ್ಲಿ ಸದಸ್ಯರೆಲ್ಲ ಚರ್ಚಿಸಿ ಜು .23 ರಿಂದ ನೀರು ಹರಿಸಲು ನಿರ್ಧರಿಸಿದ್ದೇವೆ ಎಂದರು.