ಕೆ ಎಸ್ ಈಶ್ವರಪ್ಪ ಗೆ ಉಪ ಮುಖ್ಯಮಂತ್ರಿ ಮಾಡಿ: ಕುರುಬ ಸಮಾಜದ ಮಠಾಧೀಶರಿಂದ ಹೈ ಕಮಾಂಡ್ ಗೆ ಒತ್ತಾಯ
ಬೆಂಗಳೂರು: ಲಿಂಗಾಯತ ಸಮುದಾಯದ ಮಠಾಧೀಶರು ಸಿಎಂ ಯಡಿಯೂರಪ್ಪ ಅವರ ಬೆನ್ನಿಗೆ ನಿಂತಂತೆ ಕುರುಬ ಸಮಾಜದ ಮಠಾಧೀಶರೀಗ ಕೆ.ಎಸ್. ಈಶ್ವರಪ್ಪ ಅವರ ಪರವಾಗಿ ನಿಂತಿದ್ದು ಉಪ ಮುಖ್ಯಮಂತ್ರಿ ಸ್ಥಾನವನ್ನಾದರೂ ಈಶ್ವರಪ್ಪ ಅವರಿಗೆ ನೀಡುವಂತೆ ಮಠಾಧೀಶರ ದಂಡೀಗ ಪಕ್ಷದ ಹೈಮಾಂಡ್ ಗೆ ಒತ್ತಾಯಿಸುತ್ತಿದೆ.
ಈ ಕುರಿತು ಬೆಂಗಳೂರಿನ ಮೌರ್ಯ ಹೋಟೆಲ್ ನಲ್ಲಿ ಮಖಣಾಪೂರ ಗುರುಪೀಠದ ಸೋಮಲಿಂಗೇಶ್ವರ ಮಹಾಸ್ವಾಮಿಜಿಗಳು, ಶಾಂತಮಯ ರೇವಣಸಿದ್ದೇಶ್ವರ ಮಹಾಸ್ವಾಮಿಜಿಗಳು, ಶ್ರೀ ರೇವಣಸಿದ್ದೇಶ್ವರ ಗುರು ಪೀಠ ಸರೂರ, ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಸಿದ್ಧ ಸಿರಿ ಸಿದ್ಧಾಶ್ರಮ ಕೌಲಗುಡ್ಡ ಹಣಮಾಪೂರ ಅಥಣಿ, ಚಿನ್ಮಯಾನಂದ ಮಹಾಸ್ವಾಮಿಜಿಗಳು ಗಣಿ ಆಶ್ರಮ, ಮಾಳಿಂಗರಾಯ ಮಹಾರಾಜರು, ಸುಕ್ಷೇತ್ರ ಹುಲಜಂತಿ ಸೇರಿದಂತೆ ವಿವಿಧ ಮಠಾಧೀಶರು ಸುದ್ದಿಗೋಷ್ಟಿ ನಡೆಸಿ ಈಶ್ವರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸರಕಾರ ರಚನೆಗೆ ಈಶ್ವರಪ್ಪ ಸೇರಿದಂತೆ ಹಲವರು ಕಾರಣರಾಗಿದ್ದಾರೆ. ಈಶ್ವರಪ್ಪ ಅವರನ್ನು ಎಂದೂ ಕಡೆಗಣಿಸಬಾರದು. ಅವರಿಗೆ ಸೂಕ್ತ ಸ್ಥಾನ ಕೊಡಬೇಕು. ಅವರು ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಆಗಲಿಲ್ಲ. ಉಪಮುಖ್ಯಮಂತ್ರಿ ಸ್ಥಾನವನ್ನಾದರೂ ಕೊಡಲಿ ಆಗ್ರಹಿಸಿದರು.
ಒಬ್ಬ ವ್ಯಕ್ತಿಗೆ ನಾಲ್ಕು ಸಲ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ. ಈಶ್ವರಪ್ಪ ಅವರಿಗೆ ಒಂದು ಸಲವಾದರೂ ಮುಖ್ಯಮಂತ್ರಿ ಮಾಡಬೇಕಿತ್ತು. ಈಶ್ವರಪ್ಪ ಪಕ್ಷ ಬಿಟ್ಟು ಹೋದವರಲ್ಲ. ಪಕ್ಷದಲ್ಲೇ ಇದ್ದವರು, ಇರುವವರು, ಪಕ್ಷದ ಮೇಲೆ ನಿಷ್ಠೆ ಇಟ್ಕೊಂಡಿರುವವರು. ಆದರೆ, ಅವರನ್ನು ಒಂದು ಬಾರಿಯೂ ಸಿಎಂ ಮಾಡಿಲ್ಲ ಎಂದು ಬಿಎಸ್ವೈ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು.
ಈಶ್ವರಪ್ಪ ಅವರು ಬೇಡಿಕೊಂಡು ಈ ಸ್ಥಾನ ಪಡೆಯಬಾರದು. ಅವರು ಇಷ್ಟುವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿರುವ ಫಲವಾಗಿ ಸೂಕ್ತ ಸ್ಥಾನ ಕೊಡಬೇಕು. ಕೇಂದ್ರದ ನಾಯಕರು ಇದನ್ನು ಗಮನಿಸಿ ಅವರಿಗೆ ಉಮಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ನಾವೆಲ್ಲರೂ ಉತ್ತರ ಕರ್ನಾಟಕದ ಸ್ವಾಮೀಜಿಗಳು ಈಶ್ವರಪ್ಪ ಅವರಿಗೆ ಸೂಕ್ತ ಸ್ಥಾನ ಕೊಡಿ ಅಂತ ಕೇಳುವುದಕ್ಕಾಗಿಯೇ ಇಲ್ಲಿಗೆ ಬಂದಿದ್ದೇವೆ. ಈಶ್ವರಪ್ಪ ಅವರು ಯಡಿಯೂರಪ್ಪ ಜತೆಗೆ ಪಕ್ಷ ಕಟ್ಟಿದವರು. ಅಂಥ ನಾಯಕನಿಗೆ ನಮ್ಮ ಎದುರು ಅನ್ಯಾಯ ಆಗಬಾರದು ಎಂದರು.
ಈಶ್ವರಪ್ಪ ಹಿಂದುತ್ವಕ್ಕಾಗಿ, ಪಕ್ಷಕ್ಕಾಗಿ ನಿಷ್ಠೆ ಹೊಂದಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ಕೊಡಲಿ ಎಂದು ನಾವೆಲ್ಲರೂ ವರಿಷ್ಠರ ಗಮನ ಸೆಳೆಯುತ್ತೇವೆ ಎಂದರು.
ಮುಖ್ಯಮಂತ್ರಿ ಸ್ಥಾನದ ಗೊಂದಲ ಬಗೆಹರಿದಿದೆ. ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ, ಸಿಎಂ ಸ್ಥಾನ ಬಸವರಾಜ ಬೊಮ್ಮಾಯಿಯವರಿಗೆ ಸಿಕ್ಕಿದೆ. ವಲಸೆ ಬಂದಿರುವ ಎಲ್ಲರನ್ನೂ ಪರಿಗಣಿಸಬೇಕು, ಕಡೆಗಣಿಸಬಾರದು ಎಂದು ಹೇಳಿದರು.
ಈಶ್ವರಪ್ಪ ಅವರಿಗೆ ಬೀದರ್ ನಿಂದ ಚಾಮರಾಜನಗರದ ವರೆಗೆ ಬೆಂಬಲಿಗರಿದ್ದಾರೆ. ಅವರು ಪಕ್ಷ ಕಟ್ಟಿದವರು, ಪಕ್ಷಕ್ಕಾಗಿ ತ್ಯಾಗ ಮಾಡಿದವರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದವರು. ಅವರ ನಿರ್ಧಾರ ಅವರ ವೈಯಕ್ತಿಕವಾದುದು. ಆದರೆ, ಈಶ್ವರಪ್ಪ ಅವರು ಮುಖ್ಯಮಂತ್ರಿ ಆಗಿಲ್ಲ. ಹೀಗಾಗಿ ಈಗಲಾದರೂ ಉಪಮುಖ್ಯಮಂತ್ರಿ ಸ್ಥಾನ ಕೊಡಲಿ ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಈಶ್ವರಪ್ಪ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಭರವಸೆ ಇದೆ. ಉಪಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಮುಂದೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದರು.
ವಿವಿಧ ಮಠಧೀಶರು ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.