ಕೈಗಾರಿಕಾ ಸ್ನೇಹಿ ಆಸ್ತಿ ತೆರಿಗೆ ಅನುಷ್ಠಾನಕ್ಕೆ ಅಗತ್ಯ ಸುಧಾರಣೆ – ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌

IMG-20210722-WA0006

 

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ತೆರಿಗೆ ಸುಧಾರಣೆಗೆ ಮುಂದಾಗಿದ್ದು ಈ ಬಗ್ಗೆ ಶೀಘ್ರ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್‌ ಶೆಟ್ಟರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ವಿಧಾನಸೌಧದಲ್ಲಿ ಪೌರಾಡಳಿತ ಸಚಿವರಾದ ಎಂ ಟಿ ಬಿ ನಾಗರಾಜ್‌, ನಗರಾಭಿವೃದ್ದಿ ಸಚಿವರಾದ ಬಿ ಎ ಬಸವರಾಜ್‌ ಹಾಗೂ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯದ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಎಲ್ಲಾ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ತಿಳಿಸಿದರು. ನಂತರ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಮಾತನಾಡಿ, ಕೈಗಾರಿಕೆಗಳ ಮೇಲೆ ಹಾಕಲಾಗುತ್ತಿರುವ ತೆರಿಗೆಗಳು ಬಹಳ ಹೆಚ್ಚಾಗಿವೆ. ಖಾಲಿ ಇರುವ ಜಾಗದ ಮೇಲೂ ಬಹಳಷ್ಟು ತೆರಿಗೆ ಹಾಕಲಾಗುತ್ತಿದೆ. ಅಲ್ಲದೆ, ತೆರಿಗೆ ಪದ್ದತಿಯಲ್ಲಿ ರಾಜ್ಯಾದ್ಯಂತ ಪಾರದರ್ಶಕ ಹಾಗೂ ಒಂದೇ ರೀತಿಯ ತೆರಿಗೆ ಪದ್ದತಿ ಅಳಡಿಸಿಕೊಳ್ಳುವುದು ಬಹಳ ಅವಶ್ಯಕ. ಈ ಹಿನ್ನಲೆಯಲ್ಲಿ ಇಂದು ಮೂರು ಸಚಿವರ ಉಪಸ್ಥಿತಿಯಲ್ಲಿ ಸಭೆಯನ್ನ ನಡೆಸಲಾಯಿತು. ಈ ಸಭೆಯಲ್ಲಿ ಎಲ್ಲಾ ಸಮಸ್ಯೆಗಳ ಬಗ್ಗೆಯೂ ಶೀಘ್ರವಾಗಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ತೆರಿಗೆ ಪದ್ದತಿಯ ಅನುಷ್ಠಾನಕ್ಕೆ ಅಗತ್ಯವಿರುವ ಸುಧಾರಣೆಗಳನ್ನು ಶೀಘ್ರ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು.

ಮುಂದಿನ ವಾರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಯ ಆಯುಕ್ತರುಗಳನ್ನು ಒಳಗೊಂಡ ಸಭೆಯನ್ನು ಆಯೋಜಿಸಬೇಕು. ಆ ಸಭೆಯಲ್ಲಿ ರಾಜ್ಯಾದ್ಯಂತ ಕೈಗಾರಿಕೆಗಳಿಂದ ಬಾಕಿ ಇರುವ ತೆರಿಗೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ಒಂದು ಬಾರಿಯ ವಿಶೇಷ ಯೋಜನೆಯನ್ನು ಘೋಷಿಸುವಂತಹ ನಿರ್ಧಾರಗಳನ್ನು ತಗೆದುಕೊಳ್ಳುವಂತೆ ಸಚಿವ ಜಗದೀಶ್‌ ಶೆಟ್ಟರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಾಭಿವೃದ್ದಿ ಸಚಿವರಾದ ಬಿ ಎ ಬಸವರಾಜ್‌ ಮಾತನಾಡಿ, ಕಳೆದ ಹಲವಾರು ಸಭೆಗಳಲ್ಲಿ ಚರ್ಚೆ ನಡೆಸಿರುವಂತೆ ಕೈಗಾರಿಕೆಗಳಿಗೆ ಪ್ರತ್ಯೇಕವಾಗಿ ಇನ್ನೊಂದು ಸ್ಲಾಬನ್ನು ರಚಿಸುವ ನಿಟ್ಟಿನಲ್ಲಿ, ಹಳೆಯ ತೆರಿಗೆಯನ್ನು ಒನ್‌ ಟೈಂ ಸೆಟಲ್‌ಮೆಂಟ್‌ ಬಗ್ಗೆ ಹಾಗೂ ತೆರಿಗೆಯಲ್ಲಿ ರಿಬೇಟ್‌ ನೀಡುವ ನಿಟ್ಟಿನಲ್ಲಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದನ್ನು ಮುಂದಿನ ಸಚಿವ ಸಂಪುಟ ಸಭೆಯ ಮುಂದಿಡಲಾಗುವುದು ಎಂದು ಹೇಳಿದರು.

ಪೌರಾಡಳಿತ ಸಚಿವರಾದ ಎಂ.ಟಿ.ಬಿ ನಾಗರಾಜ್‌ ಮಾತನಾಡಿ, ಕೈಗಾರಿಕೆಗಳಿಗೆ ಕರೋನಾ ಸಾಂಕ್ರಾಮಿಕದ ಸಂಧರ್ಭದಲ್ಲಿ ತೀವ್ರ ತೊಂದರೆ ಆಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯವಿರುವಂತಹ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಾಲ್‌ ಎಂ ಸುಂದರ್‌ ತೆರಿಗೆ ಸುಧಾರಣೆಯಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ಸಚಿವರುಗಳಿಗೆ ಮನವಿಯನ್ನು ಸಲ್ಲಿಸಿದರು.

ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ರಾಜ್‌ ಕುಮಾರ್‌ ಖತ್ರಿ, ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಅಜಯ್‌ ನಾಗಭೂಷಣ್‌, ನಿರ್ದೇಶಕಿ ಶ್ರೀಮತಿ ಕಾವೇರಿ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್‌ ಕೃಷ್ಣ, ಕೆಐಎಡಿಬಿ ಸಿಇಓ ಡಾ ಎನ್‌ ಶಿವಶಂಕರ್‌, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ, ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಾಲ್‌ ಎಂ ಸುಂದರ್‌, ಹಿರಿಯ ಉಪಾಧ್ಯಕ್ಷ ಡಾ. ಐ.ಎಸ್‌ ಪ್ರಸಾದ್‌ ಸೇರಿದಂತೆ ರಾಜ್ಯದ ವಿವಿಧ ಬಾಗಗಳಿಂದ ಆಗಮಿಸಿದ್ದ ಎಫ್‌ಕೆಸಿಸಿಐ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!