ಕಂಚಿನ ಪದಕಕ್ಕೆ ಮುತ್ತಿಟ್ಟ ಪಿ ವಿ ಸಿಂಧು: ಪ್ರಧಾನಿ ಯಿಂದ ಶುಭಾಶಯ: ಎರಡು ಬಾರಿ ಒಲಂಪಿಕ್ಸ್ ಪದಕ ಪಡೆದ ಏಕೈಕ ನಾರಿಗೆ ಜೈ ಎಂದ ಭಾರತೀಯರು
ಟೋಕಿಯೊ: ವಿಶ್ವ ಚಾಂಪಿಯನ್ ಪಿವಿ ಸಿಂಧು ಟೋಕಿಯೊ ಒಲಿಂಪಿಕ್ಸ್ 2021 ಕ್ರೀಡಾಕೂಟದ ಮಹಿಳೆಯರ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇದರಿಂದ ಮುತ್ತಿನ ನಗರಿಯ ಹುಡುಗಿ ಒಲಿಂಪಿಕ್ಸ್‌ನಲ್ಲಿ ಸತತ 2 ನೇ ಬಾರಿಗೆ ಪದಕಕ್ಕೆ ಮುತ್ತಿಕ್ಕಿದ್ದಾರೆ.
2016 ರಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಹೈದರಾಬಾದ್‌ನ ಸಿಂಧು, ಇದೀಗ ಕಂಚಿನ ಪದಕದೊಂದಿಗೆ ತವರಿಗೆ ವಾಪಸಾಗಲಿದ್ದಾರೆ. ಪ್ರತಿಷ್ಠಿತ ಕೂಟದಲ್ಲಿ ಸತತ ಎರಡು ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಹಾಗೂ 2ನೇ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಇದರಿಂದ ಒಲಿಂಪಿಕ್ ಕೂಟದಲ್ಲಿ ಭಾರತ ಜಯಿಸಿದ ಪದಕಗಳ ಸಂಖ್ಯೆ 2 ಕ್ಕೇರಿದೆ. ಇದಕ್ಕೂ ಮೊದಲು ಮೀರಾಬಾಯಿ ಚಾನು, ಮಹಿಳೆಯರ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಭಾನುವಾರ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಪಿವಿ ಸಿಂಧು 21-13, 21-15 ನೇರ ಗೇಮ್‌ಗಳಿಂದ ಚೀನಾದ 8ನೇ ಶ್ರೇಯಾಂಕಿತೆ ಹಿ ಬಿಂಗ್ ಜಿಯಾವೊ ಎದುರು ಜಯ ದಾಖಲಿಸಿದರು. ಶನಿವಾರ ಸೆಮಿಫೈನಲ್‌ನಲ್ಲಿ ಚೀನಾ ತೈಪೆಯ ವಿಶ್ವ ನಂ.1 ತೈ ಜು ಯಿಂಗ್ ಗೆ ಶರಣಾಗುವ ಮೂಲಕ ಸ್ವರ್ಣ ಪದಕ ಜಯಿಸುವ ಅವಕಾಶ ತಪ್ಪಿಸಿಕೊಂಡಿದ್ದರು. ಎರಡೂ ಗೇಮ್‌ಗಳಲ್ಲೂ ಸಿಂಧು ತೋರಿದ ಆಕರ್ಷಕ ನಿರ್ವಹಣೆ ಎದುರು ಚೀನಾದ ಆಟಗಾರ್ತಿ ಪ್ರಬಲ ಪೈಪೋಟಿ ನೀಡಲು ವಿಫಲರಾದರು.