ಕನ್ನಡ ಸಾಹಿತ್ಯ ಪರಿಷತ್ ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಬಿ. ವಾಮದೇವಪ್ಪ ಅಧಿಕಾರ ಸ್ವೀಕಾರ

ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಬಿ. ವಾಮದೇವಪ್ಪ ಕುವೆಂಪು ಕನ್ನಡ ಭವನದಲ್ಲಿ ನಡೆದ ಪದಗ್ರಹ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಬಿ. ವಾಮದೇವಪ್ಪ ಅವರು, ಕನ್ನಡ ಸಾಹಿತ್ಯ ಪರಿಷತ್ತಿಗೆ ಇರುವುದು ಕನ್ನಡದ ಜಾತಿಯೊಂದೆ, ಇಲ್ಲಿ ಯಾವ ಜಾತಿ, ಧರ್ಮ, ಬಣ್ಣದ ಗೋಡೆಗಳನ್ನು ಕಟ್ಟುವ ಮಾತಿಲ್ಲ. ಕನ್ನಡದ ನಾಡು-ನುಡಿ, ಭಾಷೆಗಾಗಿ ಶ್ರಮಿಸುವವರ ಜೊತೆಗೆ ಸಾಗುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿಯೇ ಆದರ್ಶ ಸಾಹಿತ್ಯ ಪರಿಷತ್ತನ್ನಾಗಿ ಮಾಡಿ ದಾವಣಗೆರೆಯ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಹೊಂಗನಸಿದ್ದು, ಅದನ್ನು ಸಾಧಿಸುವ ಗುರಿಯಿದೆ. ನೆನೆಗುದಿಗೆ ಬಿದ್ದಿರುವ ವಿಶ್ವ ಕನ್ನಡ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮಧ್ಯಕರ್ನಾಟಕದ ಹೃದಯ ಭಾಗದಲ್ಲಿರುವ ದಾವಣಗೆರೆಯಲ್ಲಿ ಆಯೋಜಿಸಬೇಕು ಎನ್ನುವ ಕನಸು ಕಂಡಿದ್ದೇನೆ. ಅದನ್ನು ನಡೆಸಲು ಸಾಕಷ್ಟು ಪರಿಶ್ರಮ ಹಾಕುತ್ತೇನೆ ಎಂದು ಭರವಸೆ ನೀಡಿದರು.
ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ಕುರ್ಕಿ ಮಾತನಾಡಿ, ಐದೂವರೆ ವರ್ಷದ ಸೇವೆಯ ಅವಧಿಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ದಾವಣಗೆರೆಯಲ್ಲಿ ಕನ್ನಡ ಭವನ ಅಸ್ಥಿತ್ವಕ್ಕೆ ತರಲು ತರಳಬಾಳು ಶ್ರೀಗಳು, ಅಂದಿನ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ, ಸದಾಶಿವಪ್ಪ ಶ್ಯಾಗಲೆ ಅವರು ಮುಖ್ಯ ಕಾರಣ ಎಂದು ಇದೇ ವೇಳೆ ನೆನೆದರು.
ಕಾರ್ಯಕ್ರಮದಲ್ಲಿ ಕಸಾಪ ನಿಕಟ ಪೂರ್ವ ಅಧ್ಯಕ್ಷರುಗಳಾದ ಎ.ಆರ್. ಉಜ್ಜನಪ್ಪ, ಎಸ್.ಪಿ. ರಂಗನಾಥ್, ಕನ್ನಡ ಪರಿಚಾರಕ ಕೆ.ಎಸ್. ಸಿದ್ದಲಿಂಗಪ್ಪ, ಉದ್ಯಮಿ ಅಣಬೇರು ರಾಜಣ್ಣ, ಹರಿಹರ ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಎನ್.ಜಿ. ಪುಟ್ಟಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.