‘ಕನ್ನಡಿಗರಿಗೆ ಅಪಮಾನವಾಗುತ್ತಲೇ ಇದೆ’: ಪ್ರಿಯಾಂಕ್ ಖರ್ಗೆ ಆಕ್ರೋಧ

‘ಕನ್ನಡಿಗರಿಗೆ ಅಪಮಾನವಾಗುತ್ತಲೇ ಇದೆ’: ಪ್ರಿಯಾಂಕ್ ಖರ್ಗೆ ಆಕ್ರೋಧ

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಂದ ಕನ್ನಡಿಗರಿಗೆ ಅಪಮಾನವಾಗುತ್ತಲೇ ಇದೆ ಎಂದು ಕಾಂಗ್ರೆಸ್ ನಾಯಕ, ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ದೂರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯನ್ನು ಬಿಜೆಪಿ ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡದೆ ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳಿದ್ದಾರೆ .

ಬಿಜೆಪಿಯವರು ಹತಾಶರಾಗಿ ಈ ಹೇಳಿಕೆ ನೀಡುತ್ತಿದ್ದು, ಪ್ರಮುಖ ವಿಚಾರ ಮುಚ್ಚಿ ಹಾಕಲು ಈ ಯತ್ನ ಮಾಡುತ್ತಿದ್ದಾರೆ. ಬಿಜೆಪಿ ಕರ್ನಾಟಕವನ್ನು ಒಡೆಯುತ್ತದೆ. ಅವರಿಗೆ ಕರ್ನಾಟಕದ ಅಸ್ಮಿತೆ ಬಗ್ಗೆ ಕಾಳಜಿ ಇಲ್ಲ. ಅವರು ರಾಜ್ಯದ ಇತಿಹಾಸ ಹಾಗೂ ಕರ್ನಾಟಕದ ಏಕೀಕರಣಕ್ಕೆ ಅವರ ಕೊಡುಗೆಯೇ ಇಲ್ಲ. ಹೀಗಿರುವಾಗ ಅವರಿಗೆ ಕನ್ನಡದ ವಿಚಾರವಾಗಿ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಪದೇ ಪದೆ ಕನ್ನಡಿಗರಿಗೆ ಅಪಮಾನ ಮಾಡುತ್ತಿದ್ದಾರೆ. ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಅವರು ರಾಯಚೂರಿನ ಉಸ್ತುವಾರಿ ಆಗಿದ್ದ ಪ್ರಭು ಚವ್ಹಾಣ್ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಈ ಸರ್ಕಾರದಲ್ಲಿ ಹಣ ಸಿಗುತ್ತಿಲ್ಲ. ಹೀಗಾಗಿ ಆಂಧ್ರ ಪ್ರದೇಶಕ್ಕೆ ರಾಯಚೂರು ಸೇರಿಸಿ ಎಂದು ಹೇಳುತ್ತಾರೆ. ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸದೇ ನಗುತ್ತಾರೆ. ಅವರಿಗೆ ಒಂದು ನೊಟೀಸ್ ಕೂಡ ಕೊಟ್ಟಿಲ್ಲ. ಇನ್ನು ಸಚಿವ ಆನಂದ್ ಸಿಂಗ್ ಅವರು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಹೇಳುತ್ತಾರೆ. ಆಗಲೂ ಬಿಜೆಪಿ ಒಂದು ಮಾತನ್ನೂ ಆಡಲಿಲ್ಲ. ಈ ಮಾತು ಆಡಿರುವುದು ಶಾಸಕರು ಹಾಗೂ ಸಚಿವರು. ಈ ಬಗ್ಗೆ ಬಿಜೆಪಿ ಸರ್ಕಾರ ಸ್ಪಷ್ಟ ನಿಲುವು ತಾಳಬೇಕಿತ್ತು ಎಂದರು.

ಈಗ ಮಹಾರಾಷ್ಟ್ರ ಮತ್ತೆ ತಗಾದೆ ತೆಗೆದಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಾಗ ಅನೇಕ ವಿಚಾರ ಮಾತನಾಡುತ್ತಾರೆ. ನನ್ನ. ಸಮಾಧಿ ತೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಪ್ರಧಾನಿ ವಿರುದ್ಧ ಸಂಚು ಮಾಡುತ್ತಿರುವುದು ಯಾರು? ಗೃಹ ಸಚಿವರು ಅಷ್ಟು ಅಸಮರ್ಥರೇ? ಪ್ರಧಾನಿಗಳು ವೈಯಕ್ತಿಕ ವಿಚಾರ ಮಾತನಾಡುತ್ತಾರೆ. ಆದರೆ ಕರ್ನಾಟಕದ ಬಗ್ಗೆ ಮಾತನಾಡುವುದಿಲ್ಲ. ಅವರು ರಾಜ್ಯಕ್ಕೆ ಬಂದಾಗ ಮಹಾರಾಷ್ಟ್ರ ತಗಾದೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!