ಕರ್ನಾಟಕ ನವನಿರ್ಮಾಣ ಸೇನೆ ಬೆಳಗಾವಿ ಅಧ್ಯಕ್ಷ ಸಂಪತ್ ಕುಮಾರ್ ದೇಸಾಯಿ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

ದಾವಣಗೆರೆ: ನಾಡದ್ರೋಹಿ ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳೆದ ಪ್ರಕರಣದಲ್ಲಿ ಬಂಧಿಸಿರುವ ಕರ್ನಾಟಕ ನವನಿರ್ಮಾಣ ಸೇನೆ ಬೆಳಗಾವಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಸಂಪತ್‌ಕುಮಾರ್ ದೇಸಾಯಿ ಬಿಡುಗಡೆಗೆ ಒತ್ತಾಯಿಸಿ ಸಂಘಟನೆಯ ಕಾರ್ಯಕರ್ತರು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಂಪತಕುಮಾರ್ ದೇಸಾಯಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಎಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಎನ್.ವೆಂಕಟೇಶ, ಬೆಳಗಾವಿಯ ಸುವರ್ಣಸೌಧದಲ್ಲಿ ಕರ್ನಾಟಕ ಸರ್ಕಾರ ವಿಧಾನಮಂಡಲ ಅಧಿವೇಶನ ನಡೆಸುತ್ತಿರುವ ಸಂದರ್ಭದಲ್ಲಿ ಸರ್ಕಾರಕ್ಕೆ ಸವಾಲೊಡ್ಡಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯ ಮಹಾಮೇಳ ಆಚರಿಸುತ್ತಿರುವ ಕ್ರಮವನ್ನು ವಿರೋಧಿಸಿ, ಮಸಿ ಬಳೆದಿರುವ ಸೇನೆಯ ಸಂಪತ್ ಕುಮಾರ್ ದೇಸಾಯಿಯವರ ನಡೆ ಸ್ವಾಭಿಮಾನಿ ಕನ್ನಡಿಗರೆಲ್ಲರೂ ಮೆಚ್ಚುವಂತದ್ದು, ಆದರೆ ಅವರನ್ನು ಬಂಧಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾಷಾ ಭಯೋತ್ಪಾದಕ ಸಂಘಟನೆಯಾದ ಎಂಇಎಸ್ ಬುಡ ಸಮೇತ ಬೆಳಗಾವಿ ನೆಲದಿಂದ ಕಿತ್ತೊಗೆಯುವ ಕೆಲಸವನ್ನು ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಇಲಾಖೆಯು ಮಾಡಬೇಕಿತ್ತು. ಆದರೆ ಆ ಕೆಲಸ ಇಂದು ಕರ್ನಾಟಕ ನವನಿರ್ಮಾಣ ಸೇನೆ ಮಾಡಿದೆ. ಇದು ಸ್ವಾಗತಾರ್ಹ ನಡೆ ಎಂದು ಸಮರ್ಥಿಸಿಕೊಂಡರು.
ಕೂಡಲೇ ಕನ್ನಡಿಗರು ಮೆಚ್ಚುವಂತಹ ಕೆಲಸ ಮಾಡಿದ ಕರ್ನಾಟಕ ನವನಿರ್ಮಾಣ ಸೇನೆಯ ಬೆಳಗಾವಿ ಯುವ ಘಟಕದ ಅಧ್ಯಕ್ಷ ಸಂಪತಕುಮಾರ್ ದೇಸಾಯಿಯವರನ್ನು ಬೆಷರತ್ತಾಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಒಂದು ವೇಳೆ ಬಿಡುಗಡೆ ಮಾಡದೇ ಹೋದರೆ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಶೇರ್ ಅಲಿ ಬೇಗ್, ಮಂಜುನಾಥ್, ಆಶ್ಪಕ್ ಅಲಿ, ಶ್ರೀಧರ್ ಪಾಟೀಲ್, ಅಯಾಜ್ ಖಾನ್ ಇತರರು ಇದ್ದರು.