ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯವ ಕ್ವಾರಿ ಕಾರ್ಮಿಕರ ಸಂಘ ಪ್ರತಿಭಟನೆ

ದಾವಣಗೆರೆ: ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನವನ್ನು ಈ ಹಿಂದಿನಂತೆ ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ ನೇರವಾಗಿ ಜಮಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯವ ಕ್ವಾರಿ ಕಾರ್ಮಿಕರ ಸಂಘ ಪ್ರತಿಭಟನೆ ನಡೆಸಿತು.
ನಗರದ ಅಶೋಕ ರಸ್ತೆಯ ಕಾಂಮ್ರೇಡ್ ಪಂಪಾಪತಿ ಭವನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತದಿಂದ ಪಿ.ಬಿ.ರಸ್ತೆಯಲ್ಲಿ ಸಾಗಿ ಉಪ ವಿಭಾಗಾಧಿಕಾರಿ ಕಚೇರಿ ತಲುಪಿ ಮನವಿ ಸಲ್ಲಿಸಿ, ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿ ಅವರಿಗೆ ರವಾನಿಸಲು ಮನವಿ ಮಾಡಿದರು.
ಸಂಘದ ರಾಜಾಧ್ಯಕ್ಷ, ಆವರಗೆರೆ ಹೆಚ್.ಜಿ. ಉಮೇಶ್ ಮಾತನಾಡಿ, ಕಲ್ಯಾಣ ಮಂಡಳಿಯ ೧೯೯೬ರ ನಿಯಮಾನುಸಾರ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿಶೇಷವಾಗಿ ಶೈಕ್ಷಣಿಕ ಹಾಗೂ ಮದುವೆ ಸಹಾಯಧನ ಮತ್ತು ಇತರೆ ಸಹಾಯಧನಗಳನ್ನು ನೋಂದಾಯಿತ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಸುಮಾರು ವರ್ಷಗಳ ಹೋರಾಟದ ಫಲವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ ಶ್ರಮಜೀವಿ ಕಟ್ಟಡ ಕಾರ್ಮಿಕರ ಬೆವರಿನ ಹನಿಯಿಂದ ಕ್ರೂಢಿಕರಿಸಿಟ್ಟ ಹಣ ಸರಿ ಸುಮಾರು ೧೦ ಸಾವಿರ ಕೋಟಿ ರು., ಮಂಡಳಿಯಲ್ಲಿರುವ ಹಣವನ್ನು ದುರುಪಯೋಗ ಪಡಿಸಿಕೊಳ್ಳದೆ ಕಟ್ಟಡ ಕಾರ್ಮಿಕರ ಅವಲಂಭಿತ ಕುಟುಂಬಗಳಿಗೆ ಸದ್ಭಳಕೆ ಆಗುವ ರೀತಿಯಲ್ಲಿ ರಕ್ಷಾ ಕವಚವಾಗಿ ಕಲ್ಯಾಣ ಮಂಡಳಿ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸಿದರು.
ಇದಲ್ಲದೇ ಶೈಕ್ಷಣಿಕ ಸಹಾಯಧನವನ್ನು ಈ ಹಿಂದಿನಂತೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಬೇಕು. ನಿರ್ಮಾಣ ಕಾರ್ಮಿಕರಿಗೆ ನೋಂದಾವಣೆ ಹಾಗೂ ಮರು ನವೀಕರಣ ಮತ್ತು ಸಹಾಯಧನದ ಅರ್ಜಿಗಳನ್ನು ಸಲ್ಲಿಸಲು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ನಿಯಮಾನುಸಾರ ಸಂಘಟನೆಗಳಿಗೆ ಕಾಮನ್ ಸರ್ವಿಸ್ ಸೆಂಟರ್ ಐಡಿ ನೀಡಬೇಕೆಂದು ಒತ್ತಾಯಿಸಿದರು.
ಖಾಲಿ ನಿವೇಶನ ಹೊಂದಿರುವ ನಗರ ಮತ್ತು ಗ್ರಾಮೀಣ ಪ್ರದೇಶ ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ೫ ಲಕ್ಷ ರು., ಗಳ ಸಹಾಯಧನದ ರೂಪದಲ್ಲಿ ನೀಡಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬವನ್ನು ಒಳಗೊಂಡಂತೆ ಇ.ಎಸ್.ಐ ಮತು ಇ.ಪಿ.ಎಫ್. ಜಾರಿ ಮಾಡಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಎಸ್.ಸಿ, ಎಸ್.ಟಿ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಜನರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಅನುಕೂಲ ಆಗುವಂತೆ ಮರಳು ಡಿಪೋವನ್ನು ಸರ್ಕಾರದ ಅಧೀನದಲ್ಲಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್, ಕಾರ್ಯಾಧ್ಯಕ್ಷ ಪಿ.ಕೆ.ಲಿಂಗರಾಜ್, ಕುಂಬಾರ ನಾಗರಾಜ, ಭೀಮಾರೆಡ್ಡಿ, ಶಿವಕುಮಾರ್ ಡಿ.ಶೆಟ್ಟರ್, ಸುರೇಶ್ ಯರಗುಂಟೆ, ಮುರುಗೇಶ್, ಜಿ.ಆರ್.ನಾಗರಾಜ್, ಮೊಹಮ್ಮದ್ ರಫೀಕ್, ಎಸ್.ಎಂ.ಸಿದ್ದಲಿಂಗಪ್ಪ, ಆವರಗೆರೆ ಸಿದ್ದಲಿಂಗಪ್ಪ, ಡಿ.ಷಣ್ಮುಗಂ, ಬಿ.ದುಗ್ಗಪ್ಪ, ನಾಗಮ್ಮ, ನೇತ್ರಾವತಿ, ತಿಪ್ಪೇಶ್, ಬಸವರಾಜ್, ಸುರೇಶ್ ಇತರರು ಇದ್ದರು.