Kondajji: ಬಾಲಕಿಯರ ಜಲಸಾಹಸ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ( Kondajji) ಜಿಲ್ಲೆಯಲ್ಲಿನ ಆರು ತಾಲ್ಲೂಕಿನಲ್ಲಿನ ಪ್ರಮುಖ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಪ್ರವಾಸಿ ತಾಣಗಳಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಅವರು ಶನಿವಾರ ಕೊಂಡಜ್ಜಿ ಕೆರೆಯಲ್ಲಿ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆ ಹಾಗೂ ಬಾಲಕಿಯರಿಗೆ ಏರ್ಪಡಿಸಲಾದ ಜಲಸಾಹಸ ಕ್ರೀಡೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಕೆರೆಯಲ್ಲಿ ಮಹಿಳೆಯರಿಗಾಗಿ ಏಪ್ರಿಲ್ 7 ರವರೆಗೆ ಉಚಿತವಾಗಿ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯು ಕ್ರೀಡೆಗೆ ಪ್ರಸಿದ್ದಿ. ಹಾಗಾಗಿ ಮಹಿಳೆಯರನ್ನು ಕ್ರೀಡಾ ವಿಭಾಗದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ದೃಷ್ಟಿಯಿಂದ ಇದನ್ನು ಪ್ರವಾಸಿ ತಾಣವಾಗಿಸಿ, ವಿವಿಧ ರೀತಿಯ ಜಲ ಸಾಹಸ ಕ್ರೀಡೆಗಳ ತರಬೇತಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಷ್ಟೇ ಅಲ್ಲದೇ ಮಹಿಳಾ ದಿನಾಚರಣೆಯ ಪ್ರಯುಕ್ತ ಸ್ಪರ್ಧೆಗಳನ್ನು ಆಯೋಜಿಸಿ, ಸ್ಪರ್ಧೆಯಲ್ಲಿ ಜಯಗಳಿಸಿದ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಜಿಲ್ಲೆಯ ಚನ್ನಗಿರಿ, ಹರಿಹರ ಮುಂತಾದ ಕ್ಷೇತ್ರಗಳಲ್ಲಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿ ತಾಣಗಳನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಜಲ ಸಹಾಸ ಕ್ರೀಡೆಯಲ್ಲಿ ಭಾಗವಹಿಸದ ಸಂತೋಷದ ಕ್ಷಣ ಹಾಗೂ ಅನುಭವಗಳ ಕುರಿತು ಮಾಹಿತಿ ಪಡೆದರು. ನಾನು ಹಿಟ್ಟಿದ ಗ್ರಾಮ ಕಕ್ಕರಗೊಳ್ಳವಾಗಿದ್ದು ತಾಲ್ಲೂಕು ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ ಕಾರ್ಯಕ್ರಮದಲ್ಲಿ ಕೊಂಡಜ್ಜಿಯಲ್ಲಿ ಭಾಗವಹಿಸಲಾಗಿತ್ತು. ಕೊಂಡಜ್ಜಿ ಕರೆಯಲ್ಲಿ ಜಲಸಾಹಸ ಕ್ರೀಡೆಗಳ ತರಬೇತಿಯನ್ನು ನೀಡಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾ, ತರಬೇತುದಾರ ಶಬ್ಬೀರ್ ಹಾಗೂ ವಿದ್ಯಾಥಿಗಳು ಭಾಗವಹಿಸಿದ್ದರು