ದೇವಾಲಯಗಳ ಹಸ್ತಾಂತರದ ಬಗ್ಗೆ ಟೀಕಿಸಿದ್ದ ಡಿಕೆಶಿಗೆ ತಿರುಗೇಟು ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ!
ಬೆಂಗಳೂರು: ಸರ್ಕಾರದ ಹಿಡಿತ ತಪ್ಪಿಸಿ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸುವುದೆಂದರೆ ಅದು ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರಿಗೆ ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೂ ಆಗಿರಬಹದು ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಆರ್‍ಎಸ್‍ಎಸ್ ಕಾರ್ಯಕರ್ತರಿಗೆ ನೂರಾರು ಕೋಟಿ ಬೆಲೆ ಬಾಳುವ ದೇವಾಲಯಗಳನ್ನು ಹಸ್ತಾಂತರಿಸುವ ಅಜೇಂಡಾ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದರು.
ಈ ಕುರಿತು ಮಾತನಾಡಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರ ಕೈಗೆ ನೀಡಬೇಕು ಎಂಬ ಆಲೋಚನೆ ಇದೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ವಿಶೇಷ ಕಾಯ್ದೆ ಜಾರಿಗೆ ತರಲು ಮುಂದಾಗಿದೆ ಎಂದಿದ್ದಾರೆ.
ಭಕ್ತರು ಅಂದರೆ ಬಿಜೆಪಿ, ಆರೆಎಸ್‍ಎಸ್ ಕಾರ್ಯಕರ್ತರು ಆಗಿರಬಹುದು, ಡಿಕೆ ಶಿವಕುಮಾರ್ ಕೂಡ ಆಗಿರಬಹುದು. ದೇವಾಲಯಗಳಿಗೆ ಬರುವವರೆಲ್ಲರೂ ಭಕ್ತರೆ ಎಂದು ಹೇಳಿದ್ದಾರೆ.
ಹೀಗಾಗಿ ದೇವಸ್ಥಾನಗಳನ್ನ ಸರ್ಕಾರದ ಹಿಡಿತದಿಂದ ತಪ್ಪಿಸಿ ನಾವು ಭಕ್ತರಿಗೆ ಕೊಡಬೇಕೆಂದು ಆಲೋಚಿಸಿದ್ದೇವೆ. ಇನ್ನೂ ಮಾರ್ಗಸೂಚಿ ಸಿದ್ಧಪಡಿಸಿಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ಹಿಂದೂ ದೇವಾಲಯಗಳನ್ನು ಯಾವುದೆ ಸಂಘ ಸಂಸ್ಥೆಗೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.