ಕೃಷಿ ಕಾರ್ಯಕ್ಕೆ ಅನುಕೂಲವಾಗಲೆಂದು ಜಮೀನುಗಳ ಸಮತಟ್ಟ ಮಾಡಲು ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಮತ್ತು ಕೃಷಿ ಇಲಾಖೆಯವರು ಅನುಮತಿ ನೀಡುತ್ತಾರೆ. ಅಂತಹ ಅನುಮತಿ ಪಡೆದವರು 10 ರಿಂದ 15 ಅಡಿ ಆಳದವರೆಗೆ ಜಮೀನುಗಳನ್ನು ಅಗೆದು ರೂ.10 ಸಾವಿರಕ್ಕೊಂದು ಲಾರಿ ಲೋಡಿನಂತೆ ಮಣ್ಣನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
4000 ವೋಲ್ಟೇಜ್ ಪ್ರಮಾಣದ ವಿದ್ಯುತ್ ಪ್ರವಾಹ ಇರುವ ಟವರ್ ಗಳು ನೆಲಕ್ಕುರುಳಿದರೆ ಊಹಿಸಲಾಗದಷ್ಟು ಹಾನಿಯಾಗುವ ಸಾಧ್ಯತೆ ಇರುತ್ತದೆ. ಟವರ್‌ಗಳ ಅಕ್ಕಪಕ್ಕದಲ್ಲೆ ಮಣ್ಣು ಅಗೆಯುವುದನ್ನು ತಡೆಯುವಲ್ಲಿ ಕೆಪಿಟಿಸಿಎಲ್ ಸೇರಿದಂತೆ ಜಮೀನು ಸಮತಟ್ಟ ಮಾಡಲು ಅನುಮತಿ ನೀಡುವ ಅಧಿಕಾರಿಗಳು ವಿಫಲರಾಗಿರುವುದು ರುಜುವಾತು ಆಗಿದೆ ಎಂದು ತಿಳಿಸಿದ್ದಾರೆ.
ಕೆಪಿಟಿಸಿಎಲ್ ಅಧಿಕಾರಿಗಳ ಭೇಟಿ: ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಗಮನಿಸಿ ಗುರುವಾರದಂದು ಕೆಪಿಟಿಸಿಎಲ್‌ನ ಟಿಎಲ್‌ಎಂ (ಪ್ರಸರಣ ಮಾರ್ಗ ನಿರ್ವಹಣೆ ಶಾಖೆ) ಎಇಇ ರೂಪ ಹಾಗೂ ಇತರೆ ಸಿಬ್ಬಂದಿ ತಾಲ್ಲೂಕಿನ ಗುತ್ತೂರು ಗ್ರಾಮದ ಸರ್ವೆ ನಂ.156/6 ನ ಜಮೀನಿನಲ್ಲಿರುವ ಟವರ್ ಭದ್ರತೆಯನ್ನು ಪರಿಶೀಲಿಸಿದರು.
ಮಣ್ಣು ಅಗೆದಿರುವುದರಿಂದ ಟವರ್ ಭದ್ರತೆಗೆ ಎದುರಾಗಿರುವ ಅಪಾಯವನ್ನು ವಿವರಿಸಿ, ಆ ಭಾಗದಲ್ಲಿ ಮಣ್ಣು ಅಗೆಯುವುದನ್ನು ತಡೆಗಟ್ಟಲು ಸೂಕ್ತ ಗಮನಹರಿಸಬೇಕೆಂದು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ಶುಕ್ರವಾರ ಪತ್ರ ರವಾನಿಸಲಾಗಿದೆ ಎಂದು ಕೆಪಿಟಿಸಿಎಲ್‌ನ ಎಇಇ ರೂಪ ತಿಳಿಸಿದ್ದಾರೆ.