ಕುರ್ಕಿ ಗ್ರಾಮದಲ್ಲಿ ನಿರ್ಮಿಸಿರುವ ಗ್ರಂಥಾಲಯ ಗ್ರಾಮಸ್ಥರ ವಿಧ್ಯಾಭ್ಯಾಸದ ಕಾಳಜಿಯನ್ನು ತೋರಿಸುತ್ತದೆ – ಕೆ ಎಸ್ ಈಶ್ವರಪ್ಪ
ದಾವಣಗೆರೆ: ಅಮೃತ ಗ್ರಾಮ ಯೋಜನೆಗೆ ಸೇರ್ಪಡೆಯಾಗದಿರುವ ಕುರ್ಕಿ ಗ್ರಾಮವನ್ನು ಈ ಯೋಜನೆಯಡಿ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪ ಹೇಳಿದರು.
ಮಾಯಕೊಂಡ ವಿಧಾನಸಭಾ ವ್ಯಾಪ್ತಿಯ ಹಿರೇತೊಗಲೇರಿ ಗ್ರಾಮದಲ್ಲಿ ಸ್ವಚ್ಛ ಸಂಕೀರ್ಣ ಹಾಗೂ ಕುರ್ಕಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಈ ಗ್ರಾ ಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಸ್ವಚ್ಛತೆಯ ಬಗೆಗೆ ಬಹಳ ಅರಿವಿದ್ದು ತುಂಬಾ ಉತ್ತಮವಾಗಿ ಸ್ವಚ್ಛ ಸಂಕೀರ್ಣ ಘಟಕ ನಿರ್ಮಿಸಿಕೊಂಡಿದ್ದಾರೆ ಅದೇ ರೀತಿ ಕುರ್ಕಿ ಗ್ರಾಮದಲ್ಲಿ ನಿರ್ಮಿಸಿರುವ ಗ್ರಂಥಾಲಯ ಗ್ರಾಮಸ್ಥರ ವಿಧ್ಯಾಭ್ಯಾಸದ ಕಾಳಜಿಯನ್ನು ತೋರಿಸುತ್ತದೆ ಎಂದರು.
ಗ್ರಾಮದ ಮಹಿಳೆಯರು ಸ್ವ ಸಹಾಯ ಸಂಘಗಳಲ್ಲಿ ಸಕ್ರಿಯವಾಗಿದ್ದು ಪ್ರತಿ ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಹಾಗೂ ಬಳಸುವ ಮೂಲಕ ಸ್ವಚ್ಛತೆಗೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚು ಗಮನ ಹರಿಸಬೇಕೆಂದರು.
ಈಗಾಗಲೇ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಜಲಜೀವನ್ ಮಿಷನ್ ಅಡಿ ಪ್ರತಿ ಮನೆಗೆ ನಳದ ಮೂಲಕ ನೀರು ಕೊಡಲು ಕಾರ್ಯೋನ್ಮುಖವಾಗಿದ್ದು 2024 ರ ವೇಳೆಗೆ ಪ್ರತಿ ಮನೆಯೂ ನಲ್ಲಿ ನೀರಿನ ಸಂಪರ್ಕ ಹೊಂದಲಿವೆ
ಅದರಂತೆ ಗ್ರಾಮ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಆಯ್ಕೆಯಾಗಿದೆ ಎಂದರು.
ಸಂಸದರಾದ ಜಿ ಎಂ ಸಿದ್ಧೇಶ್ವರ ಮಾತನಾಡಿ ಜಿಲ್ಲೆಯಲ್ಲಿ 356 ಗ್ರಾಮಗಳು ಜಲಜೀವನ್ ಮಿಷನ್ನಡಿ ನೀರು ಪೂರೈಕೆ ಆಗುತ್ತಿದ್ದು ಉಳಿದ ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸ್ವಚ್ಛ ಸಂಕೀರ್ಣ ಘಟಕವನ್ನು ಸರ್ಕಾರದ ಲೆಕ್ಕಕ್ಕಿಂತ ದೊಡ್ಡದಾಗಿ ನಿರ್ಮಿಸಿದ್ದು ಕೆಲಸದ ಬಗೆಗಿನ ನಿಮ್ಮ ಕಾಳಜಿಯನ್ನು ತೋರಿಸುತ್ತದೆ ಎಂದರು.
ಒಣತ್ಯಾಜ್ಯ ಘಟಕದೊಂದಿಗೆ ಹಸಿತ್ಯಾಜ್ಯ ಘಟಕವನ್ನು ಮಾಡಿಕೊಳ್ಳುವುದರಿಂದ ರೈತರಿಗೆ ಒಳ್ಳೆಯ ಗೊಬ್ಬರ ದೊರೆಯಲಿದೆ, ಇದರೊಂದಿಗೆ ಮಹಿಳಾ ಸ್ವ ಸಹಾಯ ಸಂಘಗಳು ಸದೃಢವಾಗುವುದರೊಂದಿಗೆ ಗ್ರಾ.ಪಂ ಗೂ ಆದಾಯ ಬರಲಿದೆ ಎಂದರು.
ಶಾಸಕರಾದ ಪ್ರೊ. ಲಿಂಗಣ್ಣ ಮಾತನಾಡಿ,ಈ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದೆಂದರು.
ಇದೇ ಸಂದರ್ಭದಲ್ಲಿ ಮನೆ ಮನೆಗೆ ಡಸ್ಟ್ ಬಿನ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಓ ವಿಜಯ ಮಹಾಂತೇಶ ದಾನಮ್ಮನವರ್ ಜಿ.ಪಂ.ಉಪ ಕಾರ್ಯದರ್ಶಿ ಆನಂದ್ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.