ಪುಕ್ಕಟ್ಟೆ ಯೋಜನೆಗಳಿಂದ ಕಾರ್ಮಿಕರ ಸಮಸ್ಯೆ – ಬಸವರಾಜ ಹೊರಟ್ಟಿ

ಬಸವರಾಜ ಹೊರಟ್ಟಿ
ಕೊಟ್ಟೂರು: ಸರ್ಕಾರಗಳು ಪುಕ್ಕಟೆ ಅಕ್ಕಿ, ಪುಕ್ಕಟೆ ಗೋಧಿ, ಪುಕ್ಕಟೆ ನೀರು ಹೀಗೆ ಪುಕ್ಕಟೆ ಕೊಡುತ್ತಾ ಹೋಗುವುದರಿಂದ ಜನರು ಕೂಲಿ ಕೆಲಸಕ್ಕೆ ಸಿಗುವುದಿಲ್ಲ. ರೈತರು ಈಗ ಮನೆ ಮಕ್ಕಳಿಗಿಂತ ಕೂಲಿಗಾಗಿ ಕಾರ್ಮಿಕರನ್ನು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ರೈತರ ಜಮೀನು ವಶಪಡಿಸಿಕೊಂಡಾಗ ನಿರಂತರ ಆದಾಯ ಕೊಡುವ ವ್ಯವಸ್ಥೆ ಬೇಕು – ಸಭಾಪತಿ ಬಸವರಾಜ ಹೊರಟ್ಟಿ
ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ನಾಲ್ಕನೇ ದಿನದಂದು ಆಯೋಜಿಸಲಾಗಿದ್ದ ಕೃಷಿಕರ ಚಿಂತನ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವ ಸರ್ಕಾರ ಪುಕ್ಕಟೆ ದಂಧೆ ಶುರು ಮಾಡುತ್ತದೆಯೋ ಅದು ರೈತ ವಿರೋಧಿ ಸರ್ಕಾರ. ಪುಕ್ಕಟೆ ಯೋಜನೆಗಳಿಂದಾಗಿ ಕೃಷಿಗೆ ಕೂಲಿ ಕಾರ್ಮಿಕರು ಸಿಗದೇ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಒಬ್ಬ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ಪಡಿತರಲ್ಲಿ ಕೊಡಲಾಗುತ್ತಿದೆ. ಇಷ್ಟೊಂದು ಅಕ್ಕಿ ನಮಗೆ ಬೇಡ ಎಂದು, ಅಕ್ಕಿಯನ್ನು ಮಾರಿಕೊಂಡು ಹಣ ಪಡೆಯುತ್ತಿದ್ದಾರೆ. ಹೀಗೆ ಸುಲಭವಾಗಿ ಹಣ ಸಿಗುವುದರಿಂದ ಕೆಲಸಕ್ಕೆ ಜನ ಬರುತ್ತಿಲ್ಲ. ರೈತರ ಬಾಳುವೆ ಸರಿ ಆಗುತ್ತಿಲ್ಲ ಎಂದರು.
ನಾನೂ ಸಹ ಕೃಷಿಕನೇ. ಹೀಗಾಗಿ ನನಗೆ ರೈತರ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ. ನನಗೆ ವಿಧಾನಸೌಧದಿಂದ ಫೋನ್ ಬಂದರೆ ಏನೂ ಅನ್ನಿಸುವುದಿಲ್ಲ. ಆದರೆ, ಹೊಲದಿಂದ ಫೋನ್ ಬಂದರೆ, ಯಾವ ಕೆಲಸದವನು ಬರಲಿಲ್ಲವೋ – ಹೊಲದಲ್ಲಿ ಏನಾಯಿತೋ ಎಂಬ ಕಳವಳ ಉಂಟಾಗುತ್ತದೆ ಎಂದರು.