Lake Soil: ಕೆರೆ ಮಣ್ಣು ರೈತರ ಜಮೀನಿಗೆ, ಎರಡು ದಿನಗಳಲ್ಲಿ ಜಾಗ ಗುರುತಿಸಿ.   ಒತ್ತುವರಿ ಕೆರೆಗಳ ತೆರವಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

WhatsApp Image 2025-04-07 at 7.05.20 PM
ದಾವಣಗೆರೆ (Lake Soil): ಕೆರೆಯಲ್ಲಿನ ಮಣ್ಣನ್ನು ರೈತರ ಜಮೀನುಗಳಿಗೆ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿ, ಮಣ್ಣು ತೆಗೆಯಲು ಸ್ಥಳವನ್ನು ಗುರುತು ಮಾಡಿಕೊಡುವ ಜವಾಬ್ದಾರಿ ಆಯಾ ಇಲಾಖೆ ಅಧಿಕಾರಿಗಳದ್ದಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.

ಅವರು ಸೋಮವಾರ (ಏ.7) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆರೆ ಒತ್ತುವರಿ ತೆರವು ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೇಸಿಗೆ ಕಾಲದಲ್ಲಿ ಕೆರೆಯ ಮಣ್ಣನ್ನು ರೈತರ ಜಮೀನುಗಳಿಗೆ ನೀಡುವುದರಿಂದ ಹೂಳೆತ್ತಿದಂತಾಗುತ್ತದೆ. ಮತ್ತು ಮಳೆಗಾಲದಲ್ಲಿ ಕೆರೆಯಲ್ಲಿ ನೀರಿನ ಸಂಗ್ರಹ ಹೆಚ್ಚು ಮಾಡಲು ಅವಕಾಶ ಇದ್ದು ರೈತರ ತೋಟ, ಜಮೀನುಗಳಿಗೆ ಹೊಸ ಮಣ್ಣು ಹಾಕವುದರಿಂದ ಬೆಳೆಯು ಉತ್ತಮವಾಗಿ ಬಂದು ರೈತರಿಗೂ ಅನುಕೂಲ, ಅಂತರ್ಜಲ ಮಟ್ಟವೂ ಹೆಚ್ಚಳವಾಗಲಿರುವುದರಿಂದ ಸ್ವಯಂ ಪ್ರೇರಿತವಾಗಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿ ಸಣ್ಣ ನೀರಾವರಿ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆ, ಜಿಲ್ಲಾ ಪಂಚಾಯತ್ ಕೆರೆಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಜಾಗ ಗುರುತಿಸಿ ರೈತರಿಗೆ ಹೂಳೆತ್ತಲು ಅವಕಾಶ ಮಾಡುವ ಕೆಲಸ ಮಾಡಬೇಕೆಂದು ತಿಳಿಸಿದರು.

ಕೆರೆ ಒತ್ತುವರಿ ತೆರವಿಗೆ ಕ್ರಮ; ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳ ವ್ಯಾಪ್ತಿಯಲ್ಲಿ 538 ಕೆರೆಗಳಿದ್ದು ಇದರಲ್ಲಿ ಸಣ್ಣ ನೀರಾವರಿ ಇಲಾಖೆಯ 72 ಕೆರೆಗಳಿವೆ. ಮತ್ತು ಶಾಂತಿಸಾಗರ ಮತ್ತು ಇತರೆ ನೀರಿನ ಸಂಗ್ರಹವಾಗುವ 22 ಕೆರೆಗಳು ಜಲಸಂಪನ್ಮೂಲ ಇಲಾಖೆಗೆ ಬರಲಿದ್ದು ಉಳಿದಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ವ್ಯಾಪ್ತಿಯ ಕೆರೆಗಳಾಗಿವೆ. ಈ ಕೆರೆಗಳ ಒತ್ತುವರಿಯನ್ನು ತೆರವು ಮಾಡಲೇಬೇಕು.

ಶಾಂತಿಸಾಗರ ಕೆರೆಯು 5447.10 ಎಕರೆಯಷ್ಟಿದ್ದು ಇದರಲ್ಲಿ 280 ಎಕರೆಯಷ್ಟು ಒತ್ತುವರಿಯಾಗಿದೆ. ಈ ಕೆರೆ 45 ಕಿ.ಮೀ ಸುತ್ತಳತೆಯನ್ನು ಹೊಂದಿರುತ್ತದೆ. ಈ ಕೆರೆಯ ಒತ್ತುವರಿಯನ್ನು ತೆರವು ಮಾಡಲು ತಹಶೀಲ್ದಾರರು ಹಾಗೂ ಜಲಸಂಪ್ಮೂಲ ಇಲಾಖೆಯವರು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 72 ಕೆರೆಗಳಿಂದ 10807.27 ಎಕರೆ ವಿಸ್ತೀರ್ಣವಿದೆ. 39 ಕೆರೆಗಳ ಅಳತೆ ಮಾಡಿದ್ದು 33 ಕೆರೆಗಳು ಬಾಕಿ ಇವೆ. ಇದರಲ್ಲಿ 21 ಕೆರೆಗಳಿಂದ 262 ಎಕರೆ ಒತ್ತುವರಿಯಾಗಿದೆ ಎಂದು ಗುರುತಿಸಿ 20 ಕೆರೆಗಳ 254 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಒತ್ತುವರಿ ತೆರವಿಗೆ 1 ಕೆರೆ ಬಾಕಿ ಇದೆ. ಜಗಳೂರು ಕೆರೆ ಒತ್ತುವರಿಯನ್ನು ತೆರವು ಮಾಡುವ ಪ್ರಕರಣ ಹೈಕೋರ್ಟ್‍ನಲ್ಲಿದ್ದು ಪುನರ್ ಪರಿಶೀಲಿಸಲು ಆದೇಶವಾಗಿರುವುದರಿಂದ ಮತ್ತೆ ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ತಹಶೀಲ್ದಾರ್‍ಗೆ ಸೂಚನೆ ನೀಡಿದರು.

ಸಭೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ.ಕರಣ್ಣನವರ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ಅಭಿಷೇಕ್, ರೈತ ಮುಖಂಡರಾದ ಬಲ್ಲೂರು ರವಿಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!