“ಜ್ಞಾನ ಸಂಜೀವಿನಿ ಆಗಲಿ ವಿಜ್ಞಾನೇಶ್ವರ ಅಧ್ಯಯನ ಪೀಠ” ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಅಭಿಮತ
ಚಿತ್ರದುರ್ಗ: ಕಾನೂನು ಮತ್ತು ನ್ಯಾಯ ಶಾಸ್ತ್ರ ಕ್ಷೇತ್ರ ದಲ್ಲಿ ಉನ್ನತಮಟ್ಟದ ಸಂಶೋಧನೆ ನಡೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಜ್ಞಾನೇಶ್ವರ ಅಧ್ಯಯನ ಪೀಠವನ್ನು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟಿಸಿದರು.
ಹುಬ್ಬಳ್ಳಿಯ ನವ ನಗರದಲ್ಲಿರುವ ರಾಜ್ಯ ಕಾನೂನು ವಿಶ್ವವಿದ್ಯಾಲಯ ದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದುರ್ಗದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ ಬಸವರಾಜ ಬೊಮ್ಮಾಯಿ , ವಿಜ್ಞಾನೇಶ್ವರ ಜ್ಞಾನಪೀಠವನ್ನು ಅಧಿಕೃತವಾಗಿ ಉದ್ಘಾಟಿಸಿರುವುದಾಗಿ ಘೋಷಣೆ ಮಾಡಿದರು.
ಜ್ಞಾನ ಮತ್ತು ಧ್ಯಾನ ಸಮಾಜಕ್ಕೆ ಬೇಕಾಗಿರುವ ಅತ್ಯಮೂಲ್ಯ ವಿಚಾರಗಳು. ಜ್ಞಾನ ಮತ್ತು ಧ್ಯಾನದ ಸಮೀಕರಣದಿಂದ ಸಮಾಜದ ಒಳಿತಿಗಾಗಿ ಬೇಕಾಗಿರುವ ಸಂಜೀವಿನಿ ನಿರ್ಮಾಣ ಸಾಧ್ಯ. ಹೀಗಾಗಿ ಸಮಾಜದ ಒಳಿತಿಗಾಗಿ ಬೇಕಾಗಿರುವ ಈ ಸಂಜೀವಿನಿಯನ್ನು ವಿಜ್ಞಾನೇಶ್ವರ ಅಧ್ಯಯನ ಪೀಠ ನೀಡಲಿ ಎಂದು ಶುಭ ಹಾರೈಸಿದರು.
ಜಸ್ಟಿಸ್ ಶಿವರಾಜ್ ಪಾಟೀಲ್ ಈ ಅಧ್ಯನ ಪೀಠದ ಪ್ರಾಧ್ಯಾಪಕರಾಗಿರುವುದು ನಮಗೆ ಹೆಮ್ಮೆಯ ವಿಷಯ. ಇದರಿಂದ ವಿಜ್ಞಾನೇಶ್ವರ ಅಧ್ಯಯನ ಪೀಠದ ಗೌರವ ಹೆಚ್ಚಿದೆ ಎಂದು ನಾನು ಭಾವಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾನೂನುಗಳಲ್ಲಿ ಎರಡು ವಿಧ. ಒಂದು ಮಾನವ ನಿರ್ಮಿತ ಕಾನೂನು. ಇನ್ನೊಂದು ದೈವದತ್ತವಾಗಿ ಇರುವ ಕಾನೂನು. ಇವೆರಡರಲ್ಲಿ ಬಹಳ ವ್ಯತ್ಯಾಸವಿದೆ. ಈ ಎರಡು ಕಾನೂನುಗಳ ನಡುವಿನ ಅಂತರವನ್ನು ಎಲ್ಲರೂ ಅರಿತುಕೊಂಡು ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಉದ್ಘಾಟನಾ ಸಮಾರಂಭದಲ್ಲಿ ಜಸ್ಟಿಸ್ ಶಿವರಾಜ್ ಪಾಟೀಲ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಈಶ್ವರ ಭಟ್ ಹಾಗೂ ಇತರೆ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.