ಅಂಗನವಾಡಿ ಕಾರ್ಯಕರ್ತರ, ಸಹಾಯಕರ ಬೇಡಿಕೆಗೆ ಸರ್ಕಾರ ಸ್ಪಂದಿಸಲಿ: ಟಿ. ಅಸ್ಗರ್
ದಾವಣಗೆರೆ: ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಚಳಿಯನ್ನೂ ಕೂಡ ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸಹ ಸರ್ಕಾರ ಅವರ ಬೇಡಿಕೆಗಳನ್ನು ಪರಿಗಣಿಸುವ ಕನಿಷ್ಠ ಪ್ರಯತ್ನ ಮಾಡದಿರುವುದು ಖೇದಕರ ಸಂಗತಿ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್ ವಿಷಾದಿಸಿದ್ದಾರೆ.
ರಾಜ್ಯದ ಮಕ್ಕಳ ಬೆಳವಣಿಗೆಗೆ ಮಾತ್ರವಲ್ಲದೆ, ಸರ್ಕಾರ ವಹಿಸಿರುವ ಎಲ್ಲಾ ರೀತಿಯ ಕೆಲಸಗಳನ್ನು ಜವಾಬ್ದಾರಿಯುತವಾಗಿ ಮಾಡಿಕೊಂಡು ಬಂದಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಂದು ಕನಿಷ್ಠ ವೇತನ ಕೂಡ ಪಡೆಯದೆ ಕೆಲಸ ನಿರ್ವಹಿಸಬೇಕಾಗಿದೆ. ಈ ಹಿಂದೆ ಕೇವಲ ಮಹಿಳಾ ಮತ್ತು ಮಕ್ಕಳ ಆರೈಕೆಯ ಕೆಲಸಕ್ಕೆಂದು ನೇಮಿಸಿಕೊಂಡು ಅರ್ಧ ದಿನದ ಕೆಲಸ ಮಾಡಿಕೊಂಡು ಬರುತ್ತಿದ್ದ ಅವರು ಇಂದು ದಿನವಿಡೀ ಅಂಗನವಾಡಿಯಲ್ಲಿ ಇಲಾಖೆಯ ಮೇಲಾಧಿಕಾರಿಗಳೂ ನೀಡುವ ಪ್ರತಿಯೊಂದು ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ.
ಪುಟ್ಟ ಮಕ್ಕಳ ಆರೈಕೆ, ಬಾಣಂತಿಯರ ಪೌಷ್ಠಿಕಾಂಶದ ಕಾಳಜಿ ವಹಿಸುವ ಜವಾಬ್ದಾರಿಯೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ, ಮಗುವಿನ ಜನನ ಮರಣದ ಜವಾಬ್ದಾರಿ ಸೇರಿದಂತೆ ಹಲವಾರು ಜವಾಬ್ದಾರಿಗಳನ್ನು ಅವರು ನಿರ್ವಹಿಸಬೇಕಾಗಿದೆ. ಇವರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದರೂ ಸರ್ಕಾರ ಅವರ ಬೇಡಿಕೆ ಈಡೇರಿಸಲು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಕೂಡಲೇ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.