ಶಾಮನೂರು ಶಿವಶಂಕರಪ್ಪರಿಂದ ಮತಾಂತರದ ವಿರುದ್ದ ಜಾಗೃತಿ ಮೂಡಿಸುವ ಕುರಿತು ಪತ್ರ

ದಾವಣಗೆರೆ: ಅನ್ಯಧರ್ಮಗಳಿಗೆ ಮತಾಂತರವಾಗುತ್ತಿರುವ ನಮ್ಮ ವೀರಶೈವ ಲಿಂಗಾಯತ ಸಮಾಜಬಾಂಧವರಲ್ಲಿ ಜಾಗೃತಿ ಮೂಡಿಸುವ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ನಮ್ಮ ವೀರಶೈವ – ಲಿಂಗಾಯತ ಧರ್ಮ ಪರಂಪರೆ ಅತ್ಯಂತ ಪ್ರಭಾವಿ , ಸಾತ್ವಿಕ ಮತ್ತು ತಾತ್ವಿಕ ನೆಲೆಯನ್ನು ಹೊಂದಿರುವುದರ ಕುರಿತು ನಾವೆಲ್ಲ ಸದಾ ಕಾಲ ಅಭಿಮಾನ ಮತ್ತು ಹೆಮ್ಮೆ ತಾಳಬೇಕು ಎಂಬುದು ಸರ್ವತಾ ಸತ್ಯದ ಮಾತು . ನಮ್ಮವರ ಒಗ್ಗಟ್ಟು , ಏಕತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಾವೆಲ್ಲ ಹೊರಲೇಬೇಕಿದೆ . ಆದರೆ ಇತ್ತೀಚಿನ ಮಾಧ್ಯಮಗಳ ವರದಿಗಳನ್ನು ನೋಡಿದಾಗ ನಮಗೆಲ್ಲ ಆತಂಕ ಮೂಡುತ್ತಿದೆ.
ನಾಡಿನ ಕೆಲಭಾಗಗಳಲ್ಲಿ ನಮ್ಮವರು ಕ್ರಿಶ್ಚಿಯನ್ ಮತ್ತಿತರ ಧರ್ಮಗಳಿಗೆ ಹಲಕೆಲವು ಪ್ರಲೋಭನೆಗಳಿಗೆ ಒಳಗಾಗಿ ಮತಾಂತರವಾಗುತ್ತಿರುವ ವಿಷಯ ನಮ್ಮನ್ನೆಲ್ಲ ಚಿಂತೆಗೀಡು ಮಾಡಿದೆ . ದೂರದೃಷ್ಟಿಯಿಲ್ಲದ , ಆರ್ಥಿಕವಾಗಿ ದುರ್ಬಲರಾಗಿರುವ ಹಾಗೂ ವೈಯಕ್ತಿಕ ವಿಷಯಗಳಿಗಾಗಿ ತೊಂದರೆಯಲ್ಲಿರುವ ಅಮಾಯಕ ಮುಗ್ಧರು ಸಾಂದರ್ಭಿಕ ಒತ್ತಡಗಳಿಗೆ ಬಲಿಯಾಗಿ ನಮ್ಮ ಶ್ರೇಷ್ಠ ಪರಂಪರೆಯನ್ನು ಬಿಟ್ಟು ಅನ್ಯ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ ಎಂಬ ಸುದ್ದಿ ಅಘಾತಕಾರಿಯಾಗಿದೆ .
ತಮ್ಮ ಜಿಲ್ಲಾ / ತಾಲ್ಲೂಕು ವ್ಯಾಪ್ತಿಯಲ್ಲಿ ಮೇಲ್ಕಂಡ ಪ್ರಕರಣಗಳು ನಡೆಯದಂತೆ ತಾವೆಲ್ಲ ಸ್ಥಳೀಯ ಮಠ – ಮಾನ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು , ಮೇಲಿನ ಪ್ರಕರಣಗಳ ತಡೆಗೆ ನಿಗಾ ಇಡಬೇಕಾಗಿದೆ . ಅಲ್ಲದೇ , ಒತ್ತಡಗಳಿಗೆ ಬಲಿಯಾದ ನಮ್ಮ ಜನರನ್ನು ಮರಳಿ ನಮ್ಮ ಧರ್ಮವ್ಯಾಪ್ತಿಗೆ ತರುವ ಕುರಿತೂ ಕಾರ್ಯಕ್ರಮ ರೂಪಿಸಬೇಕು .
ಸಂಘಟನೆಯು ಮಹಾಸಭಾ ಕೇಂದ್ರ ಕಛೇರಿಗೆ ಈ ಕುರಿತು ಮಾಹಿತಿ ಮತ್ತು ವರದಿ ನೀಡುವುದು . ಇದು ಜರೂರಾದ ( Urgent ) ಕ್ರಮವೆಂದು ಪರಿಗಣಿಸಬೇಕೆಂದೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ