Lingayatha: ಮಹಾಸಭಾ ಈಗ `ಇತ್ತ ಲಿಂಗಾಯತರು ಅನ್ನಂಗಿಲ್ಲ, ವೀರಶೈವರು ಅನ್ನಂಗಿಲ್ಲ’ ಎಂಬ ಮಟ್ಟಕ್ಕೆ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದ ಅಥಣಿ ವೀರಣ್ಣ

IMG-20251024-WA0037

ದಾವಣಗೆರೆ: (Lingayatha) ವೀರಶೈವ ಲಿಂಗಾಯತ ಸಮುದಾಯದೊಳಗೆ `ವೀರಶೈವ’ ಅಥವಾ `ಲಿಂಗಾಯತ’ ಎಂಬ ಪ್ರತ್ಯೇಕತೆಯ ವಿವಾದದಿಂದಾಗಿ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಸಮುದಾಯದ ಜನಸಂಖ್ಯೆ ಕಡಿಮೆಯಾಗುವ ಹಾಗೂ ಅಸ್ತಿತ್ವದ ಪ್ರಶ್ನೆ ಎದುರಾಗುವ ಆತಂಕವಿದೆ ಎಂದು ಲೆಕ್ಕಪರಿಶೋಧಕ ಡಾ. ಅಥಣಿ ಎಸ್. ವೀರಣ್ಣ ಹೇಳಿದರು.

ಶುಕ್ರವಾರ ಸಂಜೆ ದಾವಣಗೆರೆ ನಗರದ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀಶೈಲ‌ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 39ನೇ ವಾರ್ಷಿಕ‌ ಸ್ಮರಣೋತ್ಸವ ಮತ್ತು ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 14ನೇ ಪುಣ್ಯಾರಾಧನೆ ಜನಜಾಗೃತಿ ಧರ್ಮ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂ ಧರ್ಮದಲ್ಲಿ ಗುರುತಿಸಿಕೊಳ್ಳುವುದಕ್ಕೆ ನ್ಯಾಯಯುತ ಸಮರ್ಥನೆಯಿದೆ. ಧರ್ಮದ ಕಲಂನಲ್ಲಿ ಇತರೆ ಎಂದು ದಾಖಲಿಸಿದರೆ ಸಮುದಾಯವು ಲೆಕ್ಕಕ್ಕಿಲ್ಲದಂತಾಗುತ್ತದೆ ಎಂಬ ವಿಚಾರಕ್ಕೆ ಸಭೆಯಲ್ಲಿ ಬಹುತೇಕರು ಒಪ್ಪಿದ್ದರೂ, ಕೆಲ ನಾಯಕರು ಬುದ್ಧಿವಂತಿಕೆಯಿಂದ ಸ್ಪಷ್ಟ ತೀರ್ಮಾನ ಕೊಡದೆ ಕೈಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

10 ವರ್ಷಗಳ ಹಿಂದೆ ನಡೆದ ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನಸಂಖ್ಯೆ 80 ಲಕ್ಷ ಎಂದು ದಾಖಲಾಗಿತ್ತು. ಇದನ್ನು ತೀವ್ರವಾಗಿ ಪ್ರತಿರೋಧಿಸಿದ್ದರಿಂದ ಮತ್ತೊಮ್ಮೆ ಜಾತಿಗಣತಿ ನಡೆಸಲಾಯಿತು. ನಿಮ್ಮಲ್ಲಿ ಒಮ್ಮತ ಇಲ್ಲದೇ ಇರುವುದರಿಂದ ಸಂಖ್ಯೆ ಕಡಿಮೆಯಾಗಿದೆ ಎಂದು ಅಂದು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡಿದ್ದರು ಎಂದು ವೀರಣ್ಣ ಹೇಳಿದರು.

ಹಿಂದೆ ನಾವು ಶೇ.21ರಷ್ಟು ಇದ್ದೇವೆ ಎಂದು ಹೇಳುತ್ತಿದ್ದೆವು. ಆದರೆ ಅದನ್ನು 80 ಲಕ್ಷ ಎಂದು ತೋರಿಸಲಾಯಿತು. ಆದರೆ ಇಂದು ಒಮ್ಮತ ಇಲ್ಲದಿರುವುದರಿಂದ 80 ಲಕ್ಷಕ್ಕಿಂತಲೂ ಕಡಿಮೆ ಆಗುವಂತಹ ಸಂಭವ ಹೆಚ್ಚಾಗಿದೆ ಎಂದು ಡಾ. ವೀರಣ್ಣ ಆತಂಕ ವ್ಯಕ್ತಪಡಿಸಿದರು. ವೀರಶೈವ ಮತ್ತು ಲಿಂಗಾಯತ ಸಮುದಾಯದ ಪ್ರತ್ಯೇಕ ಮಾನ್ಯತೆಗಾಗಿ ಈ ಹಿಂದೆ ಮೂರು ಬಾರಿ ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ ಎಂದು ಡಾ. ವೀರಣ್ಣ ಸ್ಮರಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ (ಲಾಲ್ ಕೃಷ್ಣ ಅಡ್ವಾಣಿ ಗೃಹ ಮಂತ್ರಿ ಆಗಿದ್ದರು) ಈ ವಿಚಾರವಾಗಿ ಹೋದಾಗ, “ನೀವೆಲ್ಲ ಹಿಂದೂಗಳಲ್ಲ ಎಂದರೆ ನಾವು ಎಲ್ಲಿಗೆ ಹೋಗಬೇಕು?” ಎಂದು ಅಡ್ವಾಣಿ ಅವರು ಸ್ಪಷ್ಟವಾಗಿ ಹೇಳಿ, ಪ್ರತ್ಯೇಕ ಮಾನ್ಯತೆ ನೀಡಲು ನಿರಾಕರಿಸಿದರು. ನಂತರ ಸೋನಿಯಾ ಗಾಂಧಿ ಮತ್ತು ಮನ್‌ಮೋಹನ್ ಸಿಂಗ್ ಅವರ ಬಳಿಯೂ ಮನವಿ ಮಾಡಿದರೂ, ಯಾವುದೇ ಸ್ಪಷ್ಟ ಉತ್ತರ ಬರಲಿಲ್ಲ ಎಂದು ವಿವರಿಸಿದರು.

ಹಿಂದೆ ಅಖಿಲ ಭಾರತ ವೀರಶೈವ ಮಹಾಸಭಾ ಇತ್ತು. ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ಅದು ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ’ ಎಂದು ಬದಲಾಯಿತು. ಇದಕ್ಕೆ ರಂಭಾಪುರಿ ಜಗದ್ಗುರುಗಳ ಪ್ರೋತ್ಸಾಹವಿದೆ. ಆದರೆ, ಈ ಮಹಾಸಭೆ ಈಗ `ಇತ್ತ ಲಿಂಗಾಯತರು ಅನ್ನಂಗಿಲ್ಲ, ವೀರಶೈವರು ಅನ್ನಂಗಿಲ್ಲ’ ಎಂಬ ಮಟ್ಟಕ್ಕೆ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾವು ಲಿಂಗಾಯತರು ಎಂದು ಹೇಳಿದರೆ ನೂತನ ಧರ್ಮದ ಮಾನ್ಯತೆ ಸಿಗುತ್ತದೆ ಎಂಬ ವಾದ ಕೆಲವರದ್ದು. ಆದರೆ, ಈ ರೀತಿಯ ಪ್ರತ್ಯೇಕತೆಯಿಂದ ಮಾನ್ಯತೆ ಸಿಗುವ ಸಾಧ್ಯತೆ ಬಹಳ ಕಡಿಮೆ ಮತ್ತು ಯಾವ ಕಾಲಕ್ಕೂ ಅದು ಆಗುವುದಿಲ್ಲ ಎಂದು ಡಾ. ವೀರಣ್ಣ ಗಂಟಾಘೋಷವಾಗಿ ಹೇಳಿದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮುದಾಯ ಬದಲಾವಣೆಯಾಗಬೇಕು. ಇತ್ತೀಚೆಗೆ ದಾವಣಗೆರೆಯಲ್ಲಿ ರೇಣುಕ ಮಂದಿರದಲ್ಲಿ ಪಂಚಮಹಾ ಪೀಠಾಧೀಶ್ವರರು ಒಟ್ಟಿಗೆ ಸೇರಿದ್ದು ಒಂದು ಭಾಗ್ಯ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಜನಗಣತಿ ನಡೆಸುತ್ತದೆ. ಈ ಹಿನ್ನೆಲೆಯಲ್ಲಿ ಜಗದ್ಗುರುಗಳು ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿ ಎಂದು ವೀರಣ್ಣ ಆಶಿಸಿದರು.

ಪುಣ್ಯಾರಾಧನಾ ಸಮಿತಿ ಕಾರ್ಯಾಧ್ಯಕ್ಷ ಎನ್.ಎ. ಮುರುಗೇಶ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ಶ್ರೀಶೈಲ ಪೀಠವು ಅಜ್ಞಾನದ ಅಂಧಕಾರವನ್ನು ತೊಡೆದು ಸುಜ್ಞಾನದ ಬೆಳಕನ್ನು ತುಂಬಿದ ಭವ್ಯ ಪರಂಪರೆಯ ಮಹಾಪೀಠವಾಗಿದೆ. ಈ ಪೀಠದ ಬೆಳವಣಿಗೆಯಲ್ಲಿ ಮೂವರು ಪೀಠಾಧಿಪತಿಗಳ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.
ಲಿಂಗೈಕ್ಯ ಶ್ರೀಗಳನ್ನು ಸ್ಮರಿಸಿದ ಅವರು, ಇಂದಿನ ಜಗದ್ಗುರುಗಳು ಮ್ಮದೇ ಆದ ಶೈಲಿಯಲ್ಲಿ ಪೀಠವನ್ನು ಮುನ್ನಡೆಸುತ್ತಿದ್ದಾರೆ. ನೊಂದವರು, ಬಡವರು, ಅಂಧರು, ಅಂಗವಿಕಲರು ಮತ್ತು ವಿಧವೆಯರಿಗೆ ಸಹಾಯ ಮಾಡುವ ಮೂಲಕ ಸಮಾಜದಲ್ಲಿ ಹೊಸ ಬದಲಾವಣೆ ತರುವ ದೊಡ್ಡ ಚೇತನರಾಗಿದ್ದಾರೆ ಎಂದರು.

ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ ‌ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ‌ ಮಹಾಸ್ವಾಮೀಜಿ, ಶ್ರೀಶೈಲ‌ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಡಾ.ಒಡೆಯರ್ ಚೆನ್ನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮುಸ್ಟೂರು ಓಂಕಾರ‌ ಉಚ್ಚನಾಗಲಿಂಗ ಮಠದ ರುದ್ರಮುನಿ‌ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರುಸಿದ್ದ ಶಿವಚಾರ್ಯ‌ಸ್ವಾಮೀಜಿ, ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ವರ್ತಕ ಎಸ್.ಜಿ.‌ಉಳುವಯ್ಯ, ವಕೀಲ ತ್ಯಾವಣಗಿ ಮಲ್ಲಿಕಾರ್ಜುನ‌, ಡಿ.ಎಂ. ಹಾಲಸ್ವಾಮಿ ಉಪಸ್ಥಿತರಿದ್ದರು.
ಸುನಿತಾ ವೀರನಾರಾಯಣ‌ಸ್ವಾಮಿ, ಶಾರದಮ್ಮ‌ ಕೆ.ಬಿ.‌ಹನುಮಂತಪ್ಪ, ವಿ.‌ಮನೋಹರ ಅವರಿಗೆ ಗುರುರಕ್ಷೆ ನೀಡಲಾಯಿತು.

ದೇವರ ಹಿಪ್ಪರಗಿಯ ಪ್ರೊ.ಸಿ.ಜಿ.‌ಮಠಪತಿ ಉಪನ್ಯಾಸ‌ ನೀಡಿದರು
ವಾಗೀಶಯ್ಯ ಧ್ವಜವಂದನೆ ನೆರವೇರಿಸಿದರು. ಬಿ.ಎಂ. ವಾಗೀಶ ಸ್ವಾಮಿ‌ ಸ್ವಾಗತಿಸಿದರು. ಸಂಗೀತಾ ರಾಘವೇಂದ್ರ ಪ್ರಾರ್ಥಿಸಿದರು. ಅಧ್ಯಾಪಕಿ‌ ಸೌಭಾಗ್ಯ ಹಿರೇಮಠ ನಿರೂಪಿಸಿದರು. ವಿಜಯಾ ಹಿರೇಮಠ ಸಂಗೀತ ಸೇವೆ ನೀಡಿದರು.

ಇತ್ತೀಚಿನ ಸುದ್ದಿಗಳು

error: Content is protected !!