ಲಯನ್ಸ್ ಕ್ಲಬ್ ಪ್ರಾಂತೀಯ ಸಮ್ಮೇಳನ; ” ಮರಳು ಭೂಮಿಗೆ ಮರು ಜೀವ” ಅಭಿವೃದ್ಧಿಗೆ ಸಹಕಾರ: – ಅಮರನಾರಾಯಣ
ದಾವಣಗೆರೆ; ಈ ಜಿಲ್ಲೆಯ ಋಣ ನನ್ನ ಮೇಲಿದೆ, ಪರಿಸರ ಪೂರಕ ಕಾರ್ಯಕ್ರಮಗಳನ್ನು ರೂಪಿಸಿದರೆ ಉಚಿತ ಸಲಹೆ ಮತ್ತು ಸೇವೆ ಮಾಡಲು ಸಿದ್ಧವೆಂದು ಪರಿಸರ ಪ್ರೇಮಿ ಮಾಜಿ ಡಿಸಿ ಕೆ. ಅಮರನಾರಾಯಣ ರವರು ಕರೆ ನೀಡಿದರು.
ಅವರು ಇಲ್ಲಿನ ಬಂಟರ ಭವನದಲ್ಲಿ ಲಯನ್ಸ್ ಕ್ಲಬ್ ನವರು ಏರ್ಪಡಿಸಿದ್ದ 317 ಸಿ ಯ ಪ್ರಾದೇಶಿಕ ವಲಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ನಾನು ಜಿಲ್ಲಾಧಿಕಾರಿಯಾಗಿದ್ದಾಗ ನೆಟ್ಟಿದ್ದ ಮರಗಳು ಇಂದು ನೆರಳು ನೀಡುತ್ತಿವೆ.ಅಲ್ಲದೆ ಕೆಲ ಗಿಡಗಳು ಹಣ್ಣುಗಳನ್ನು ನೀಡುತ್ತಿವೆ. ನನ್ನ ಜೀವನ ಸಾರ್ಥಕವಾಗಿದೆ ಎಂದರು.
ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳಾಗಿದ್ದಾಗ ಬೀಜದುಂಡಿಗಳನ್ನು ಮಾಡಿ ಬಾತಿವನದಲ್ಲಿ ಹಾಕಿದ್ದೇವೆ. ಇದನ್ನು ನೋಡಿ ಆಂಧ್ರದ ತೆಲಂಗಾಣ ಸರ್ಕಾರದವರು ನನ್ನನ್ನು ಕರೆಸಿ ಸುಮಾರು 40 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿ ಬೀಜದುಂಡೆಗಳನ್ನು ತಯಾರಿಸಿದರು. ಇದು ನನ್ನ ಸೌಭಾಗ್ಯ ಎಂದರು.
“ಮರಳು ಭೂಮಿಗೆ, ಮರುಜೀವ” ಎಂಬಂತೆ ಬಂಜರು ಭೂಮಿ ಮತ್ತು ಬೆಟ್ಟಗಳಲ್ಲಿ ನಮ್ಮ “ಗೋ ಗ್ರೀನ್” ಎಂಬ ಸಂಸ್ಥೆ ಬೀಜದುಂಡೆಗಳನ್ನು ಹಾಕಿ ಗಿಡ ಬೆಳೆಸುವ ಹೊಸ ಯೋಜನೆಯನ್ನು ರೂಪಿಸಿವೆ. ಇದಕ್ಕೆ ಇಂಥ ಲಯನ್ಸ್ ಕ್ಲಬ್ ಗಳಂತಹ ಸೇವಾ ಸಂಸ್ಥೆಗಳು ಬೆಟ್ಟಗುಡ್ಡಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದೆ ಬಂದರೆ ನಾನು ಸಹ ಬರುತ್ತೇನೆ ಎಂದರು.
ಮುಂಬರುವ ದಿನಗಳಲ್ಲಿ ವಿದ್ಯುತ್ ಮತ್ತು ಹನಿ ನೀರಿಗೂ ಪರದಾಡ ಬೇಕಾಗುತ್ತದೆ. ಈಗಿನಿಂದಲೇ ಮಿತವಾಗಿ ಬಳಸುವಂತೆ ಕರೆ ನೀಡಿ, ಅಡಿಕೆ ಮತ್ತು ಕಬ್ಬು ಬೆಳೆಯುವುದನ್ನು ಕಡಿಮೆ ಮಾಡದಿದ್ದರೆ ಆಹಾರಕ್ಕೂ ಪರದಾಡಬೇಕಾಗುತ್ತದೆ ಎಂದು ನುಡಿದು ಸೇವಾ ಕಾರ್ಯಕ್ರಮಗಳಿಗೆ ಸದಾ ತಮ್ಮ ಸಹಕಾರ ಇದೆ ಎಂದರು.
ರಾಜಕಾರಣಿಗಳು ಮಾಡುವ ದಾನ ಮತ್ತು ಇತರೆ ಸೇವೆಗಳಲ್ಲಿ ಸ್ವಾರ್ಥ ಇರುತ್ತದೆ. ಆದರೆ ಲಯನ್ಸ್ ಕ್ಲಬ್ ನವರು ಮಾಡುವ ಕಾರ್ಯಗಳು ನಿಸ್ವಾರ್ಥತೆಯಿಂದ ಕೂಡಿರುತ್ತವೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ರವರು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಲಯನ್ಸ್ ಲೇಡಿ ಶ್ರೀಮತಿ ಲೀಲಾ ಓಂಕಾರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವಲಯ ಅಧ್ಯಕ್ಷ ಎಸ್ ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ಕಿರುತೆರೆ ನಟ ಸುಜಯ್ ಹೊಳಲು, ಮೊಹಮ್ಮದ್ ಹನೀಫ್, ಶ್ರೀಮತಿ ಸಪ್ನಾ ಸುರೇಶ್,ಆರ್.ಜಿ.ಶ್ರೀನಿವಾಸ ಶೆಟ್ಟಿ, ಬೆಳ್ಳೂಡಿ ಶಿವಕುಮಾರ್, ಎಂ. ಸಿ. ಬಸವರಾಜ್, ರವಿಶಂಕರ್ ವಾಲಿ, ಕೆ.ಟಿ. ಮಹಾಲಿಂಗೇಶ್, ಎಂ. ಎಂ. ಭೀಮಾನಂದ ಶೆಟ್ಟಿ, ಉಮೇಶ್, ಹೆಚ್.ಯು. ಮಂಜುನಾಥ ಸ್ವಾಮಿ, ನಾಗಭೂಷಣ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಅಜಯ್ ಪ್ರಾರ್ಥಿಸಿದರು.ಬೆಳ್ಳೂಡಿ ಶಿವಕುಮಾರ್ ಸ್ವಾಗತಿಸಿದರು. ಮಾಜಿ ಗೌರ್ನರ್ ಡಾ. ಬಿ.ಎಸ್. ನಾಗಪ್ರಕಾಶ್ ಪ್ರಸ್ತಾವಿಕ ಭಾಷಣ ಮಾಡಿದರು. ವಾಸದೇವರಾಯ್ಕರ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಸೈಕಲ್, ಮಹಿಳೆಯರಿಗೆ ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಸೈಕಲ್ ಹಾಗೂ ಶ್ರೀ ಅನ್ನದಾನೇಶ್ವರ ಮಠದ ಕಟ್ಟಡಕ್ಕೆ ಚೆಕ್ ಅನ್ನು ವಿತರಿಸಿದರು.