ಸಾಹಿತಿಯಾದವರು ತಮ್ಮ ಅನುಭವದ ಜ್ಞಾನದ ಮೂಲಕ ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿ, ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೃಢ ನಿಲುವು ವ್ಯಕ್ತಪಡಿಸಬೇಕು – ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ

literature book release

ದಾವಣಗೆರೆ: ಸಾಹಿತಿಯಾದವರು ತಮ್ಮ ಅನುಭವದ ಜ್ಞಾನದ ಮೂಲಕ ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿ, ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೃಢ ನಿಲುವು ವ್ಯಕ್ತಪಡಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ವೀಣಾಮೃತ ಪ್ರಕಾಶನದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಿ.ಎಂ.ವೀಣಾ ಮಹಾಂತೇಶ್ ಅವರ ‘ಹೊನ್ನುಡಿ ಒಲುಮೆಯ ಕೊಳಲು’ ಹಾಗೂ ‘ಮನಸ್ಸೆಂಬ ಖಜಾನೆ’ ಕವನ ಸಂಕಲನ ಮತ್ತು ಆಂಜನೇಯ ಕೆ.ಹೆಚ್.ಕುಂದೂರು ಅವರ ಸುರಭಿ ಕನ್ನಡ ವ್ಯಾಕರಣ ಹಾಗೂ ಸಾಮಾನ್ಯ ಕನ್ನಡ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಾಮಾಜಿಕ, ರಾಜಕೀಯ ಸ್ಥಿತ್ಯಂತರದ ಸಂದರ್ಭದಲ್ಲಿ ಜನರು ಯಾವ ದಿಕ್ಕಿನಲ್ಲಿ ಸಾಗಬೇಕೆಂಬ ಶಕ್ತಿ ನೀಡುವುದೇ ಸಾಹಿತ್ಯವಾಗಿದೆ ಎಂದು ಅಭಿಪ್ರಾಯಿಸಿದರು. ಸಾಹಿತ್ಯವು ಸಾಮಾಜಿಕ ಸಮಸ್ಯೆ, ತಲ್ಲಣಗಳಿಗೆ ಧ್ವನಿಯಾದಾಗ ಮಾತ್ರ ಬಹುಕಾಲ ಉಳಿಯುತ್ತದೆ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿರುವ ಕಾರಣದಿಂದಲೇ ವಚನ ಸಾಹಿತ್ಯ, ದಾಸ ಸಾಹಿತ್ಯವು ಶತಮಾನಗಳ ನಂತರವೂ ಜನಮಾನಸದಲ್ಲಿ ಉಳಿದಿದೆ ಎಂದು ಹೇಳಿದರು.

ಶರಣ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಮನುಕುಲದ ಉದ್ಧಾರಕ್ಕಾಗಿ ರಚನೆಯಾದ ಸಾಹಿತ್ಯಗಳಾಗಿದ್ದು, ಅವುಗಳಲ್ಲಿನ
ಸತ್ವದಿಂದಾಗಿ ಇಂದಿಗೂ ಪ್ರಸ್ತುತವಾಗಿದೆ ಎಂದರು. ಸಾಹಿತಿಯು ಪೂರ್ವಗ್ರಹ ಪೀಡಿತನಾಗದೆ,
ಜಾತಿ, ಮತದ ಆಚೆ ನಿಂತು ರಚಿಸುವ ಸಾಹಿತ್ಯ ರಚಿಸಬೇಕು. ಇಡೀ ಸಮಾಜವನ್ನು ಪರಿವರ್ತಿಸಲಾಗದಿದ್ದರೂ, ಆ ನಿಟ್ಟಿನಲ್ಲಿ
ಮಾರ್ಗದರ್ಶನ ಮಾಡುವ ಜವಾಬ್ದಾರಿ ಹೊಂದಬೇಕು ಎಂದು ಹೇಳಿದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃತಿಗಳ ಕುರಿತು ವೈದ್ಯ
ಸಾಹಿತಿಗಳಾದ ಡಾ.ಶಶಿಕಲಾ ಕೃಷ್ಣಮೂರ್ತಿ, ಡಾ.ಗೀತಾ ಬಸವರಾಜ್ ಮಾತನಾಡಿದರು.ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ, ಉಪನ್ಯಾಸಕ ಸಿ.ಎನ್.ಚಂದ್ರೇಗೌಡ, ಪರಮೇಶ್ವರಪ್ಪ, ಲೇಖಕರಾದ ಬಿ.ಎಂ.ವೀಣಾ
ಮಹಾಂತೇಶ್, ಆಂಜನೇಯ ಕೆ.ಹೆಚ್.ಕುಂದೂರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!