ಸಾಹಿತಿ ಶಿಕ್ಷಕಿ ಚಂಪಾ ಡಿ.ಸಿ. ಅವರಿಗೆ ಜಿಲ್ಲಾ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ

ದಾವಣಗೆರೆ: ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯಿಂದ ಪ್ರತಿ ವರ್ಷ ಪ್ರದಾನ ಮಾಡುತ್ತಿರುವ ಹೊನ್ನೇನಹಳ್ಳಿ ಹನುಮಕ್ಕ ನಂಜಪ್ಪ ಮೆಳ್ಳೆಕಟ್ಟೆ ಸ್ಮರಣಾರ್ಥ ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯಶ್ರೀ ಪ್ರಶಸ್ತಿಯು ಈ ವರ್ಷ ಶಿಕ್ಷಕಿ ಮತ್ತು ಸಾಹಿತಿ ಚಂಪಾ ಡಿ ಸಿ ಇವರಿಗೆ ಸಲ್ಲಲಿದೆ. ಕುವೆಂಪು ಕನ್ನಡ ಭವನದಲ್ಲಿ 29ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಈ ಪ್ರಶಸ್ತಿ ಸಮಾರಂಭ ನಡೆಯಲಿದೆ. ಇವರ ಹಲವಾರು ಕಥೆಗಳು, ಕವನಗಳು ಮತ್ತು ಬಿಡಿ ಲೇಖನಗಳು, ನಾಟಕಗಳು ಹಲವಾರು ದಿನಪತ್ರಿಕೆ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.
ಮೂಲತಃ ಕಾದಂಬರಿಕಾರರಾದ ಶ್ರೀಮತಿ ಚಂಪಾರವರು 2016 ರಲ್ಲಿ ಬರೆದ ‘ನಿಯತ್ತು’ ಕಾದಂಬರಿ ದಾವಣಗೆರೆ ವಿಶ್ವವಿದ್ಯಾಲಯಲ್ಲಿ ಸಂಶೋಧನಾ ಪ್ರಬಂಧಕ್ಕೆ ಆಯ್ಕೆಯಾಗಿದೆ. 2019ರಲ್ಲಿ `ಪ್ರತೀಕ್ಷೆ’ 2020ರಲ್ಲಿ `ಪ್ರೀತಿಮೇಡಂ’ ಅದೇ ವರ್ಷ `ಮೊಡದೊಳಗಿನ ಮಿಂಚು’ ಮತ್ತು ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಸ್ಥಾಪಕರಾದ ಶಿಕ್ಷಣ ಶಿಲ್ಪಿ ಎಂ ಎಸ್ ಶಿವಣ್ಣನವರ ಜೀವನ ಆಧಾರಿತ `ಶೂನ್ಯದಿಂದ ಶಿಖರಕ್ಕೆ’ ಕಾದಂಬರಿ ಹಾಗೂ 2021 ರಲ್ಲಿ `ಕೀರ್ತಿಯ ಬೆನ್ನೇರಿ’ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಜಿಲ್ಲಾ ಅತ್ಯುತ್ತಮ ಶಿಕ್ಷಕಿ’, `ಜಿಲ್ಲಾ ಗುರುಶ್ರೀ ರಾಜ್ಯೋತ್ಸವ ಪ್ರಶಸ್ತಿ’, `ಸಾಹಿತ್ಯ ರತ್ನ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಚಂಪಾರವರು ಅವಿರತ ಬರವಣಿಗೆಕಾರರು.
ಯೇಸು ಕ್ರಿಸ್ತನ ಜನನ ಮತ್ತು ಜೀವನ ಕುರಿತು ಖಂಡ ಕಾವ್ಯ ರಚಿಸಿದ್ದಾರೆ. ‘ಹಾಡು ಮರೆತ ಹಕ್ಕಿ’ ಕವನ ಸಂಕಲನ, ‘ಋಣವರಿತವಳು’ ಕಥಾ ಸಂಕಲನ ಮತ್ತು ‘ಹಕ್ಕಿ ಗೂಡು ಸೇರಿತು’ ಕಾದಂಬರಿ ಲೋಕಾರ್ಪಣೆಗೆ ಸಿದ್ಧಗೊಂಡಿವೆ. ಎಲೆ ಮರಿ ಕಾಯುವಂತಿದ್ದ ಸಾಹಿತಿ ಚಂಪಾರನ್ನು ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಗುರುತಿಸಿ ಸನ್ಮಾನಿಸುತ್ತಿರುವುದು ಉದಯೋನ್ಮಖ ಸಾಹಿತಿಗಳಿಗೆ ಸ್ಫೂರ್ತಿದಾಯಕ.