ಜಿಲ್ಲಾ ಕಸಾಪ ವತಿಯಿಂದ ಎಲೆಬೇತೂರಿನಲ್ಲಿ ಸಾಹಿತ್ಯ ಸಮ್ಮೇಳನಕ್ಕಾಗಿ ಸ್ಥಳ ಪರಿಶೀಲನೆ.
ದಾವಣಗೆರೆ :ಎಲೆಬೇತೂರು ಗ್ರಾಮಸ್ಥರ ಕನ್ನಡ ಭಾಷಾ ಪ್ರೇಮ ಅನನ್ಯ...
ಜಗಳೂರು ರಸ್ತೆಯಲ್ಲಿರುವ ಮಗಾನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಸಮ್ಮೇಳನ…
– ಬಿ.ವಾಮದೇವಪ್ಪ
ಅಧ್ಯಕ್ಷ, ಜಿಲ್ಲಾ ಕಸಾಪ
ಎಲೆಬೇತೂರು ಗ್ರಾಮಸ್ಥರ ಕನ್ನಡ ಭಾಷಾ ಪ್ರೇಮ ಮತ್ತು ಅಭಿಮಾನ ಅನನ್ಯವಾದುದು. ಇಂತಹ ಸ್ಥಳದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಮಗೆ ತುಂಬಾ ಹೆಮ್ಮೆಯಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಹರ್ಷ ವ್ಯಕ್ತಪಡಿಸಿದರು.
ಅವರಿಂದು ಎಲೆಬೇತೂರು ಗ್ರಾಮದಲ್ಲಿ 11 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಸ್ಥಳ ಪರಿಶೀಲಿಸಲು ಕಸಾಪ ನಿಯೋಗದೊಂದಿಗೆ ಎಲೆಬೇತೂರಿಗೆ ತೆರಳಿ ಗ್ರಾಮಸ್ಥರೊಂದಿಗೆ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಮುಂಬರುವ 26 ಮತ್ತು 27 ರಂದು ಎಲೆಬೇತೂರಿನಲ್ಲಿ ಎರಡು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈಗಾಗಲೇ ನಿರ್ಣಯ ಕೈಗೊಳ್ಳಲಾದ ಹಿನ್ನಲೆಯಲ್ಲಿ ಎಲೆಬೇತೂರಿನಲ್ಲಿ ಗ್ರಾಮದ ಪ್ರಮುಖರ, ಜನಪ್ರತಿನಿಧಿಗಳ, ಕಸಾಪ ಆಜೀವ ಸದಸ್ಯರ ಹಾಗೂ ಕನ್ನಡಪರ ಸಂಘಟಕರ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿತ್ತು.
ಎಲೆಬೇತೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ, ಸರಕಾರಿ ಪ್ರೌಢಶಾಲಾ ಆವರಣ ಹಾಗೂ ಮಗಾನಹಳ್ಳಿ ಅಂಬಾಸಣ್ಣನವರ ಜಮೀನು ಇವುಗಳ ಪೈಕಿ ಯಾವುದಾದರೂ ಒಂದು ಸ್ಥಳದಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು. ಸಾಧ್ಯಾಸಾಧ್ಯತೆಗಳ ಚರ್ಚೆಯ ನಂತರ ಜಗಳೂರು ರಸ್ತೆಯಲ್ಲಿರುವ ಮಗಾನಹಳ್ಳಿ ಅಂಬಾಸಣ್ಣ ಅವರ ವಿಶಾಲವಾದ ಜಮೀನಿನಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಯಿತು ಹಾಗೂ ಸಮ್ಮೇಳನ ನಡೆಸುವ ನಿಟ್ಟಿನಲ್ಲಿ ಎಲೆಬೇತೂರು, ಬಿ.ಕಲಪನಹಳ್ಳಿ, ಪುಟಗನಾಳ್, ಕಾಡಜ್ಜಿ, ಬಸವನಾಳ, ರಾಂಪುರ, ನಾಗರಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಮ್ಮೇಳನಕ್ಕೆ ಸರ್ವ ರೀತಿಯಿಂದಲೂ ತನು ಮನ ಧನದೊಂದಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.
ಎಲೆಬೇತೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅದನ್ನು ಯಶಸ್ವಿಯಾಗಿ ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಗ್ರಾಮದ ಪ್ರಮುಖರಾದ ಬಿ.ಕರಿಬಸಪ್ಪ ಹೇಳಿದರು. ಮತ್ತೋರ್ವ ಮುಖಂಡರಾದ ಬಿ.ಜಿ.ಸಂಗನಗೌಡರು ಮಾತನಾಡಿ ಎಲೆಬೇತೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಸಾಪ ಆಜೀವ ಸದಸ್ಯರಿದ್ದಾರೆ. ಅವರೆಲ್ಲರೂ ಗ್ರಾಮದ ಮುಖ್ಯಸ್ಥರೊಂದಿಗೆ ಸಹಕರಿಸಿ ಸಮ್ಮೇಳನದ ಯಶಸ್ಸಿಗೆ ದುಡಿಯುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಎಲೆಬೇತೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ನಿರ್ಣಯ ಕೈಗೊಂಡಿದ್ದಕ್ಕಾಗಿ ಎಲೆಬೇತೂರು, ಬಿ.ಕಲಪನಹಳ್ಳಿ, ಪುಟಗನಾಳ್, ಕಾಡಜ್ಜಿ, ರಾಂಪುರ, ನಾಗರಕಟ್ಟಿ ಬಸವನಾಳ ಗ್ರಾಮಸ್ಥರು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅವರನ್ನು ಅಭಿನಂದಿಸಿ ಗೌರವಿಸಿದರು.
ಸಮಾಲೋಚನಾ ಸಭೆಯಲ್ಲಿ ಗ್ರಾಮದ ಪ್ರಮುಖರಾದ ಬಿ.ಕರಿಬಸಪ್ಪ, ಬಿ.ಜಿ.ಸಂಗನಗೌಡ, ಬಿ.ವಿರುಪಾಕ್ಷಪ್ಪ, ಎಂ.ಪತ್ರಿಬಸಪ್ಪ, ಎಂ.ಬಸವರಾಜಪ್ಪ ಕಲಪನಹಳ್ಳಿ, ಸೋಮಣ್ಣ, ಬಸವಲಿಂಗಪ್ಪ, ನಾಗರಾಜ್, ಹೆಚ್.ಬಸಪ್ಪ, ಮಠದ ಬಸವರಾಜಯ್ಯ, ಟಿ.ರಾಜಪ್ಪ, ಎಂ.ಬಸವನಗೌಡ, ಎಂ.ಎಸ್.ಮಂಜುನಾಥ್, ಎಂ.ಚಂದ್ರಶೇಖರಪ್ಪ, ಎಂ.ರಾಜಪ್ಪ, ಹೆಚ್.ಎಸ್.ಚೇತನ್ ಕುಮಾರ್, ಬಿ.ನಿಂಗರಾಜ್, ಹೆಚ್.ಗಂಗಪ್ಪ, ಬಿ.ಶಿವಕುಮಾರ್, ಎಂ.ಷಡಾಕ್ಷರಪ್ಪ, ಕೆ.ಇ.ಬಿ.ಕರಿಬಸಪ್ಪ, ಶಶಿಧರ ಹೆಮ್ಮನಬೇತೂರು, ಎ.ಕೆ.ನಾಗೇಂದ್ರಪ್ಪ, ಎ.ಕೆ.ಬಸಪ್ಪ, ಎ.ಕೆ.ರಾಜಪ್ಪ ಮತ್ತಿತರರು ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸುವುದಾಗಿ ತಿಳಿಸಿದರು.
ಕಸಾಪ ನಿಯೋಗದಲ್ಲಿ ಮಾಜಿ ಅಧ್ಯಕ್ಷ ಲಯನ್ ಉಜ್ಜನಪ್ಪ, ಗೌರವ ಕಾರ್ಯದರ್ಶಿ ಬಿ.ದಿಳ್ಳ್ಯಪ್ಪ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ದಾವಣಗೆರೆ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಚನ್ನಗಿರಿ ತಾಲೂಕು ಅಧ್ಯಕ್ಷ ಎಲ್.ಜಿ.ಮಧುಕುಮಾರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್.ಎಮ್.ಮಲ್ಲಮ್ಮ, ರುದ್ರಾಕ್ಷಿ ಬಾಯಿ ಪುಟ್ಟಾನಾಯ್ಕ್, ಶಿಕ್ಷಕ ಜಗದೀಶ್ ಸಿ.ಜಿ.ಕೂಲಂಬಿ ಇದ್ದರು.