ಬೆಳಗ್ಗೆ 6-12 ಲಾಕ್ ಡೌನ್ ಓಪನ್, ಖರೀದಿಗೆ ಮುಗಿಬಿದ್ದ ಜನ, ಸಂಚಾರ ನಿಯಂತ್ರಣಕ್ಕೆ ಹೈರಾಣಾದ ಪೊಲೀಸ್
ದಾವಣಗೆರೆ : ಜಿಲ್ಲೆಯಲ್ಲಿ ಕೊರೋನಾ ಸ್ಪೋಟಗೊಳ್ಳುತ್ತಿದ್ದರೂ, ನಗರದ ಕೆಆರ್ ಮಾರುಕಟ್ಟೆ ಸೇರಿದಂತೆ ಇತರೆ ಏರಿಯಾಗಳಲ್ಲಿ ಜನ ಜಾತ್ರೆ ಕಂಡು ಬಂದಿತು. ಹಳ್ಳಿಯಿಂದ ಎದ್ದನೋ-ಬಿದ್ದನೋ ಎಂದು ಮಾರುಕಟ್ಟೆಗೆ ಆಗಮಿಸಿದ ಜನರು ಮನೆ ಸಂತೆ ಮಾಡುವುದು ಸೇರಿದಂತೆ ತುರ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಮುಗಿಬಿದ್ದಿರುವುದು ಕಂಡು ಬಂದಿತು.
ಜೂನ್ 7ರವರೆಗೆ ಲಾಕ್ಡೌನ್ ಮುಂದುವರಿಕೆ ಇದ್ದು, ಸೋಮವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಜನ ಸಂಸಾರದ ಸಮೇತ ಮಾರುಕಟ್ಟೆಗೆ ನುಗ್ಗಿದರು. ಇಡೀ ಕೆಆರ್ ಮಾರುಕಟ್ಟೆ ನಿಯಂತ್ರಿಸಲು ಇಬ್ಬರಿಂದ ಮೂರು ಪೊಲೀಸ್ ಪೇದೆಯನ್ನು ಕರ್ತವ್ಯಕ್ಕೆ ಹಾಕಿದ್ದರೂ, ಇವರ ಕೈಯಲ್ಲಿ ಜನರನ್ನು ಹತೋಟಿಗೆ ತರಲಾಗಲಿಲ್ಲ.
ಜನ ಜಾತ್ರೆ ನಿಯಂತ್ರಣಕ್ಕೆ ಕೈ ಜೊಡಿಸಿದ ತಹಸೀಲ್ದಾರ್ ಗಿರೀಶ್
ಜೂ.7ರ ನಂತರವೂ ಲಾಕ್‌ಡೌನ್ ಆಗುತ್ತದೆ ಎಂದು ಜನರು, ಚಿಲ್ಲರೇ ವ್ಯಾಪಾರಿಗಳು ಮುಗಿಬಿದ್ದು ವ್ಯಾಪಾರ ಮಾಡಿದರು. ಜಿಲ್ಲಾ ಕೇಂದ್ರದ ಹೃದಯ ಭಾಗದ ಕೆ.ಆರ್. ಮಾರ್ಕೆಟ್, ಗಡಿಯಾರ ಕಂಬದ ರಸ್ತೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಚಾಮರಾಜಪೇಟೆ, ಮಂಡಿಪೇಟೆ, ವಿನೋಬ ನಗರ 2 ಮತ್ತು 3ನೇ ಮುಖ್ಯ ರಸ್ತೆ, ನಿಟುವಳ್ಳಿ, ವಿದ್ಯಾನಗರ, ಆಂಜನೇಯ ಬಡಾವಣೆ, ತರಳಬಾಳು ಬಡಾವಣೆ ಹೀಗೆ ವಿವಿಧ ಕಡೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳ ದಟ್ಟಣೆ, ಜನರ ಓಡಾಟ ಎಲ್ಲವೂ ಜಾತ್ರೆಯನ್ನು ನೆನಪು ಮಾಡುವಷ್ಟು ಜನಸಂದಣಿ ಇರುವುದು ಕಂಡು ಬಂದಿತು.