Lokayukta; 20 ಸಾವಿರ ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಹರಿಹರ ನಗರಸಭೆ ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳು
ದಾವಣಗೆರೆ: (Lokayukta) ಹರಿಹರ ನಗರದ ಪೆಟ್ರೋಲ್ ಬಂಕ್ ನಿವೇಶನದ ಕಂದಾಯವನ್ನು ಕಡಿಮೆ ಮಾಡಿಕೊಡುವ ಉದ್ದೇಶದಿಂದ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ನಗರಸಭೆ ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳ ತಂಡಕ್ಕೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ್ ಹಾಗೂ ಕಂದಾಯ ಅಧಿಕಾರಿ ರಮೇಶ್ ಎಂಬುವವರು ದಾವಣಗೆರೆ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ರಾಜು ಲಕ್ಷ್ಮಣ್ ಕಾಂಬ್ಳೆ ಎಂಬುವವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಸಹೋದರ ಬಾಬು ಹರಿಹರ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಬಳಿಯ ಶ್ರೀದೇವಿ ಪೆಟ್ರೋಲ್ ಬಂಕ್‌ನ ನಿವೇಶನದ ಸುಮಾರು 3 ರಿಂದ 4 ವರ್ಷಗಳ ಕಂದಾಯವನ್ನು ಪಾವತಿಸಬೇಕಿತ್ತು. ಹರಿಹರ ನಗರಸಭೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ್ ಹಾಗೂ ಕಂದಾಯ ಅಧಿಕಾರಿ ಯು. ರಮೇಶ್ ಅವರು ನಿವೇಶನಕ್ಕೆ ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಕಂದಾಯದ ಮೊತ್ತ 1,39,400 ರೂಗಳನ್ನು ಪಾವತಿಸಬೇಕಾಗುತ್ತೆ ಎಂದು ತಿಳಿಸಿದ್ದರು.
ಕಂದಾಯ ಮೊತ್ತ 1,39,400 ರೂ, ಕಡಿಮೆ ಮಾಡಿ, ಸುಮಾರು 50-60 ಸಾವಿರ ರೂಪಾಯಿಗಳ ಮೊತ್ತವನ್ನು ನೀಡಿ. ಇದಕ್ಕೆ 20 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ಕೊಡಲು ಇಷ್ಟವಿಲ್ಲದ ಲಕ್ಷ್ಮಣ್ ಕಾಂಬ್ಳೆ, ನಗರಸಭೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಶುಕ್ರವಾರ ಅಕ್ಟೋಬರ್ 25 ರಂದು 20,000 ರೂಪಾಯಿ ಲಂಚದ ಹಣ ಸ್ವೀಕರಿಸುವ ಸಮಯದಲ್ಲಿ ಕಾರ್ಯಾಚರಣೆ ನಡೆಸಿ ಕಂದಾಯ ಅಧಿಕಾರಿ ರಮೇಶ್ ಹಾಗೂ ಕಂದಾಯ ನಿರೀಕ್ಷಕ ನಾಗೇಶ್ ಇಬ್ಬರನ್ನೂ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ. ಎಸ್.ಕೌಲಾಪೂರೆ, ಪೊಲೀಸ್ ಉಪಾಧೀಕ್ಷಕಿ ಕಲಾವತಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಮಧುಸೂದನ್ ಸಿ., ಪ್ರಭು, ಸರಳ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.