ದಾವಣಗೆರೆಯಲ್ಲಿ ಲೋಕಾಯುಕ್ತ ದಾಳಿ, ಕೈಗಾರಿಕೆ, ವಾಣಿಜ್ಯ ಇಲಾಖೆ ಸಹಾಯ ನಿರ್ದೇಶಕ ಕಮಲರಾಜ್ ಬಳಿ ಭಾರಿ ಆಸ್ತಿ ಪತ್ತೆ.!

ದಾವಣಗೆರೆ : ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿರುವ ದಾವಣಗೆರೆ ಲೋಕಾಯುಕ್ತ ಎಸ್ಪಿ ಕೌಲಾಪುರೆ ನೇತೃತ್ವದ ತಂಡ ಕೈಗಾರಿಕೆ, ವಾಣಿಜ್ಯ ಇಲಾಖೆ ಸಹಾಯ ನಿರ್ದೇಶಕ ಕಮಲರಾಜ್ ಮನೆ ಸೇರಿದಂತೆ ನಾನಾ ಕಡೆ ದಾಳಿ ನಡೆಸಿದೆ.

ದಾವಣಗೆರೆ ಕಮಲರಾಜ್ ಬಳಿ ಏನೇನಿತ್ತು?

6 ನಿವೇಶನ, 2 ವಾಸದ ಮನೆ, 1 ಎಕರೆ ಕೃಷಿ ಜಮೀನು ಇದರ ಒಟ್ಟು ಮೌಲ್ಯ 1 ಕೋಟಿ 32 ಲಕ್ಷ, ಚರ ಆಸ್ತಿಯ ಅಂದಾಜು ಮೌಲ್ಯ 1 ಲಕ್ಷದ 15 ಸಾವಿರ, 15 ಲಕ್ಷ 79 ಸಾವಿರ ಚಿನ್ನಾಭರಣ, 32 ಲಕ್ಷದ 30 ಸಾವಿರ ಬೆಲೆಬಾಳುವ ವಾಹನಗಳು, ರೂ.18 ಲಕ್ಷ ಬೆಲೆಬಾಳುವ ಇತರೆ ವಸ್ತುಗಳು

ಆದಾಯಕ್ಕಿಂತ ಆಸ್ತಿ ಹೆಚ್ಚು ಗಳಿಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ದಾವಣಗೆರೆ ಡಿಸಿ ಕಚೇರಿ ಬಳಿ ಇರುವ ಕಚೇರಿ, ಶಕ್ತಿನಗರದ 3ನೇ ಕ್ರಾಸ್‌ನಲ್ಲಿನ ಮನೆ, ಚಿತ್ರದುರ್ಗದಲ್ಲಿನ 3 ಮನೆ ಮೇಲೆ ದಾಳಿ ನಡೆದಿದೆ. ದಾಳಿ ಸಂದರ್ಭದಲ್ಲಿ ಅಧಿಕಾರಿಗೆ ಸೇರಿದ ಒಂದು ಇನ್ನೋವಾ ಕಾರ್, ಬುಲೆಟ್ ಬೈಕ್,  ಮೂರು ನಿವೇಶನ ಇರುವುದು ಗೊತ್ತಾಗಿದೆ. ಅಲ್ಲದೇ1 ಲಕ್ಷ ನಗದು, ಚಿನ್ನ ಸಿಕ್ಕಿದೆ. ಪರಿಶೀಲನೆ ಕಾರ್ಯ ನಡೆಯುತ್ತಿದೆ.

ಲೋಕಾಯುಕ್ತ ಇನ್ಸ್ಪೆಕ್ಟರ್‌ಗಳಾದ ಮಧು ಸೂದನ್ ಹಾಗೂ ಪ್ರಭು ಸೇರಿದಂತೆ 10ಕ್ಕೂ ಹೆಚ್ಚು ಸಿಬ್ಬಂದಿ ಪರಿಶೀಲನೆಯಲ್ಲಿ ತೊಡಗಿದ್ದು, ಇನ್ನಷ್ಟು ಮಾಹಿತಿ ಬರಬೇಕಿದೆ.

ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ದಾವಣಗೆರೆ, ಧಾರವಾಡ, ಬೆಳಗಾವಿ ಹಾವೇರಿ, ಬೀದರ್​ ಸೇರಿದಂತೆ ರಾಜ್ಯದ ವಿವಿಧೆಡೆ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ 

ಧಾರವಾಡದಲ್ಲಿ ಕೆಐಎಡಿಬಿ ಎಇಇ ಮನೆ ಮೇಲೆ ದಾಳಿ: ಕೆಐಎಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ಅವರಿಗೆ ಸಂಬಂಧಪಟ್ಟ ಆರು ಕಡೆಗಳಲ್ಲಿ ಅಧಿಕಾರಿಗಳು ದಾಳಿ‌ ಮಾಡಿದ್ದಾರೆ. ಧಾರವಾಡದಲ್ಲಿ ಮೂರು, ಸವದತ್ತಿ ತಾಲೂಕಿನಲ್ಲಿ ಎರಡು ಹಾಗೂ ನರಗುಂದದಲ್ಲಿ ಒಂದು ಕಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಂಬಂಧಿಕರ ಮನೆ‌ ಮೇಲೂ ದಾಳಿ

ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಗೋವಿಂದಪ್ಪ ಭಜಂತ್ರಿ ಅವರ ಸಂಬಂಧಿಕರು ಸವದತ್ತಿ ತಾಲೂಕಿನ ಉಗರಗೋಳದಲ್ಲಿ ಹೊಂದಿರುವ ಫಾರ್ಮ್ ಹೌಸ್ ಮೇಲೆ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಾವೇರಿಯ ಗ್ರಾಮೀಣ ನೀರು ಸರಬರಾಜು ಉಪವಿಭಾಗದ ಎಇ ಮೇಲೆ ದಾಳಿ: ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಉ‌ಪ‌ವಿಭಾಗದ ಎಇ ಕಾಂತೇಶ್ ಭಜಂತ್ರಿ ಎಂಬುವರ ಕಚೇರಿ ಹಾಗೂ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾಂತೇಶ್ ಭಜಂತ್ರಿ ಕೆಲಸ ಮಾಡುತ್ತಿದ್ದ ಹಿರೇಕೇರೂರು ಕಚೇರಿ, ನಗರದಲ್ಲಿರುವ ಎರಡು ಮನೆಗಳ ಮೇಲೆ‌ ಈ ದಾಳಿ ನಡೆದಿದೆ. ಇತ್ತ ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ‌ ಡಿಡಿ‌ ಶ್ರೀನಿವಾಸ್ ಆಲದರ್ತಿ ಅವರ ನಿವಾಸದ ಮೇಲೂ ದಾಳಿ ಮಾಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಮನೆ ಮೇಲೆ ದಾಳಿ

ರಾಣೆಬೆನ್ನೂರು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿರುವ ಜ್ಯೋತಿ ಶಿಗ್ಲಿ ಅವರ ಮನೆ ಮೇಲೂ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೃತ್ಯುಂಜಯ ನಗರದ ನಿವಾಸಕ್ಕೆ ತೆರಳಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಬೀದರ್‌ನಲ್ಲಿ ಲೋಕಾಯುಕ್ತ ದಾಳಿ

ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರ ಕುಮಾರ್ ರೊಟ್ಟಿ ಅವರ ನಿವಾಸ ಹಾಗೂ ಕಚೇರಿಯ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಹನುಮಂತ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬೀದರ್, ಬೆಂಗಳೂರಿನಲ್ಲಿರುವ ನಿವಾಸ ಹಾಗೂ ನೌಬಾದ್‌ನಲ್ಲಿರುವ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ರವೀಂದ್ರ ಕುಮಾರ್ ಅವರು ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರಾಗುವುದಕ್ಕೂ ಮುನ್ನ ಬೀದರ್ ಡಿಸಿ ಕಚೇರಿಯಲ್ಲಿ ಶಿರಸ್ತೇದಾರ ಹಾಗೂ ಬಿಬಿಎಂಪಿಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!