Lokayukta: ಏಪ್ರಿಲ್ 22 ರಿಂದ ಉಪಲೋಕಾಯುಕ್ತರ ಭೇಟಿ, ಸಾರ್ವಜನಿಕ ಅಹವಾಲು ಸ್ವೀಕಾರ, ಅರ್ಜಿಗಳ ವಿಚಾರಣೆ: ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ

IMG-20250328-WA0007

ದಾವಣಗೆರೆ: (Lokayukta) ಉಪಲೋಕಾಯುಕ್ತರಾದ  ಬಿ.ವೀರಪ್ಪ ಅವರು ಇದೇ ಏಪ್ರಿಲ್ 22 ರಿಂದ 26 ರ ವರೆಗೆ ದಾವಣಗೆರೆಯಲ್ಲಿ ಪ್ರವಾಸ ಕೈಗೊಂಡು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸುವರು ಎಂದು ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ಹೇಳಿದರು.
ಶುಕ್ರವಾರ ಅವರ ಕಚೇರಿಯಲ್ಲಿ ಉಪ ಲೋಕಾಯಕ್ತರ ಭೇಟಿ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಉಪಲೋಕಾಯುಕ್ತರು ಏಪ್ರಿಲ್ 22 ರಂದು ದಾವಣಗೆರೆಗೆ ಆಗಮಿಸಿ ಏ.23 ರಂದು ವಿವಿಧ ಸ್ಥಳಗಳಿಗೆ ಭೇಟಿ ನೀಡುವರು. ಏ.24 ರಂದು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮ.1.30 ಹಾಗೂ ಮ.2.30 ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳ ವಿಚಾರಣೆ ನಡೆಸುವರು.

ಏ.25 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಾಕಿ ಇರುವ ಲೋಕಾಯುಕ್ತ ಪ್ರಕರಣಗಳ ವಿಚಾರಣೆ ನಡೆಸುವರು.
ಉಪ ಲೋಕಾಯುಕ್ತರ ಪ್ರವಾಸ ಕುರಿತು ಸಾರ್ವಜನಿಕರಿಗೆ ಸಾಕಷ್ಟು ಮಾಹಿತಿ ಕೊರತೆ ಇದೆ. ಸಾರ್ವಜನಿಕರಿಗೆ ಅರಿವು ಮೂಡಿಸಲು ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕರಪತ್ರ, ಆಹ್ವಾನ ಪತ್ರಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸುವ ಮೂಲಕ ಮತ್ತು ಕರ ಪತ್ರಗಳನ್ನು ಸಾರ್ವಜನಿಕ ಕಚೇರಿ, ಆಸ್ಪತ್ರೆ, ಇನ್ನಿತರೆ ಕಚೇರಿಗಳಲ್ಲಿ ಪ್ರದರ್ಶಿಸಬೇಕು. ಅಲ್ಲದೇ ನಗರಸಭೆ ಮತ್ತು ಗ್ರಾಮ ಪಂಚಾಯತ್‌ಗಳಲ್ಲಿನ ಸ್ವಚ್ಚವಾಹಿನಿಗಳಲ್ಲಿ ಹಾಗೂ ಡಿಜಿಟಲ್ ಬೋರ್ಡ್ ಗಳಲ್ಲಿಯೂ  ಉಪ ಲೋಕಾಯುಕ್ತರ ಭೇಟಿ ಕುರಿತು ಪ್ರಚಾರ ಮಾಡಬೇಕು. ಅಷ್ಟೇ ಅಲ್ಲದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಂಗೂರ ಸಾರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಜಿಲ್ಲಾಪಂಚಾಯತ್ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಜಂಟಿ ಕೃಷಿ ನಿರ್ದೇಶಕ ವಿ.ಶ್ರೀನಿವಾಸ ಚಿಂತಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಕಾವ್ಯ ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!