ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ದ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿ ಐ ಟಿ ಯು

ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಮೇಲಿನ ಭ್ರಷ್ಟಾಚಾರದ ಗಂಭೀರ ಆರೋಪವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಲು ಒತ್ತಾಯಿಸಿ ಜಯದೇವ ವೃತ್ತದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಹೈದ್ರಾಬಾದ ಕರ್ನಾಟಕಕ್ಕೆ ಸೇರಿದ ಆರು ಜಿಲ್ಲೆಗಳ ಅಂಗನವಾಡಿ ಕೇಂದ್ರಗಳ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು, ಬಾಣಂತಿಯರು, ಗರ್ಭಿಣಿ ಮಹಿಳೆಯರಿಗೆ ಪ್ರತಿದಿನ ಕೊಡಲಾಗುವ ಮೊಟ್ಟೆಗಳನ್ನು ವಿತರಿಸುವ ಟೆಂಡರ್ ನಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಬಿಜೆಪಿಯ ಗಂಗಾವತಿ ಶಾಸಕ ಪರಪ್ಪ ಮುನವಳ್ಳಿಯವರು ಇಬ್ಬರು ಕೊಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ಕೇಂದ್ರಗಳಿಗೆ ನೀಡಲಾಗುವ ಪೌಷ್ಟಿಕ ಆಹಾರ ಮತ್ತು ಮೊಟ್ಟೆಗಳ ವಿತರಣೆಯಲ್ಲೂ ಆಯಾ ಕೇಂದ್ರಗಳಿಗೆ ಅಲ್ಲಿನ ಫಲಾನುಭವಿಗಳನ್ನ ಅನುಸರಿಸಿ ನೀಡದೇ ಕಡಿಮೆ ನೀಡಲಾಗುತ್ತಿರುವ ಆರೋಪವು ಕೇಳಿಬಂದಿದೆ. ಆದ್ದರಿಂದ, ಕೂಡಲೆ ಈ ಇಬ್ಬರ ರಾಜಿನಾಮೆಯನ್ನು ಮುಖ್ಯಮಂತ್ರಿಗಳು ಪಡೆಯಬೇಕು ಮತ್ತು ಭ್ರಷ್ಟಾಚಾರದ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರಾದ ಹೊನ್ನೂರು ತಿಮ್ಮಣ್ಣ, ಗುಡಪ್ಪ, ಆಟೋ ಚಾಲಕರ ಸಂಘದ ಮುಖಂಡರಾದ ಶ್ರೀನಿವಾಸ ಮೂರ್ತಿ, ಜಯನಾಯ್ಕ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ರವಿ ನಾಯ್ಕ, ಕರ್ನಾಟಕ ರೈತ ಸಂಘದ ಜಿಲ್ಲಾ ಮುಖಂಡರಾದ ಇ.ಶ್ರೀನಿವಾಸ್, ಆನಂದರಾಜು ಮತ್ತಿತರರು ಭಾಗವಹಿಸಿದ್ದರು.