ಮಾನವೀಯ ಮೌಲ್ಯ ಬರಿದಾಗುತ್ತಿದೆಯೇ..? ವೈದ್ಯರ ದಿನಾಚರಣೆ ಪ್ರಯುಕ್ತ ಡಾ.ರಾಮಚಂದ್ರ ಕಾರಟಗಿಯ ಲೇಖನ

ದಾವಣಗೆರೆ: ಪರೋಪಕಾರಾರ್ಥಂ ಇದಂ ಶರೀರಂ ಎನ್ನುವ ಮಾತಿದೆ ಆದರೆ ಈ ನುಡಿ ಇಂದಿನ ಕಾಲಘಟ್ಟದಲ್ಲಿ ನಿಜಕ್ಕೂ ಮೌಲ್ಯ ಕಳೆದುಕೊಳ್ಳುತ್ತಿರುವುದು ಇಂದಿನ ದುಸ್ಥಿತಿಗೆ ಹಿಡಿದ ಕೈಗನ್ನಡಿ. ಹಸು ತನ್ನ ಕೆಚ್ಚಲಿನ ಹಾಲನ್ನು ಎಂದಾದರೂ ಕುಡಿದಿದೆಯೇ… ಮರಗಳು ನಮಗಾಗಿ ಹಣ್ಣು ಬಿಡುತ್ತವೆ. ನದಿಗಳು ನಮಗೆ ನೀರು ಹರಿಸುತ್ತಿವೆ…ಇದು ಪರೋಪಕಾರ ಅಲ್ಲವೇ.. ಪರೋಪಕಾರದಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಆದರೆ ಕೋರೊನಾದಂತಹ ಈ ಕಾಲಘಟ್ಟದಲ್ಲಿ ಮಾನವೀಯ ಬಂಧಗಳು ಮರೆಯಾಗುತ್ತಿವೆಯೇನೋ ಎಂದೆನಿಸುತ್ತಿದೆ.
ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು ಕೆಲವೆಡೆ ಅಕ್ಕಪಕ್ಕದವರು ಅಮಾನವೀಯವಾಗಿ ಕಾಣುತ್ತಿರುವ ಘಟನೆಗಳು ನನ್ನ ಕಣ್ಣ ಮುಂದೆಯೇ ನಡೆಯುತ್ತಿವೆ.ತೀರ ಇತ್ತೀಚೆಗೆ ಹುಬ್ಬಳ್ಳಿಯ ಭೈರಿದೇವರಕೊಪ್ಪದ ದಂಪತಿಗೆ ಸೋಂಕು ದೃಢಪಟ್ಟಿತ್ತು ಆದರೆ ಮಾನವೀಯತೆ ತೋರಬೇಕಿದ್ದ ಅಕ್ಕಪಕ್ಕದ ಮನೆಯವರು ಮನೆ ಖಾಲಿ ಮಾಡುವಂತೆ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ನಿಜಕ್ಕೂ ಇದು ದುಃಖದ ಸಂಗತಿ.ಒಂದು ರೀತಿ ಮಾನವೀಯ ಮೌಲ್ಯಗಳು ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಮಾನವೀಯ ಮೌಲ್ಯಗಳು, ಜೀವನ ಮೌಲ್ಯಗಳು ಕೂಡಾ ಆಗಬೇಕು. ಮನುಷ್ಯ ಮನುಷ್ಯನ ನಡುವಿನ ಸಂಬಂಧ ಉತ್ತಮವಾಗಬೇಕು. ಕಷ್ಟದಲ್ಲಿರುವವರ ಸಂಕಷ್ಟ ಪರಿಹರಿಸಲು ಸಹಾಯಹಸ್ತ ಚಾಚುವುದು ಇಂದಿನ ಅಗತ್ಯ ಅಲ್ಲವೇ ಆ ದಂಪತಿಯ ಕರುಣಾಜನಕ ಸ್ಥಿತಿ ಕಂಡು ನಮ್ಮ ಜನರ ವರ್ತನೆಗೆ ನಿಜಕ್ಕೂ ಬೇಸರವೆನಿಸಿತು.
ಕೋರೊನಾ ಸೋಂಕು ಇದ್ದರೂ ಕೂಡ ಅವರ ಆರೋಗ್ಯ ಸುಸ್ಥಿತಿಯಲ್ಲಿದೇ..ದೇವಸ್ಥಾನದಲ್ಲಿ ಉಳಿದುಕೊಳ್ಳಲು ಕೇಳಿದ್ದಾರೆ ಅಲ್ಲಿಯೂ ನಿರಾಸೆಯಾಗಿದೆ ಕೊನೆಗೆ ಬಸ್ ನಿಲ್ದಾಣದ ಬಳಿಯಿರುವ ಒಂದು ಲಾಡ್ಜ್ ನಲ್ಲಿ ಸದ್ಯ ವಾಸವಿದ್ದಾರೆ ಅಲ್ಲಿಂದ ಯಾರಿದಂಲೋ ನನ್ನ ಮಾಹಿತಿ ಕಲೆಹಾಕಿ ಕರೆ ಮಾಡಿ ತಮ್ಮ ಸಂಕಷ್ಟ ತೋಡಿಕೊಂಡಾಗ ಕೂಡಲೇ ಅವರಿಗೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಿದ್ದೇನೆ.ಆದರೆ ನಮ್ಮ ಜನರ ಈ ಮನಸ್ಥಿತಿ ಕಂಡು ನಿಜಕ್ಕೂ ಬೇಸರವಾಯಿತು.
ಸಾವಿಲ್ಲದ ಮನೆಯ ಸಾಸಿವೆ ಎಲ್ಲಿದೆ.ಇದನ್ನು ಅರಿಯದವರು ಯಾಕೆ ಈ ರೀತಿ ವರ್ತಿಸುತ್ತಿದ್ದಾರೆ.ಇರುವುದೊಂದೆ ಜೀವನ ಅರಿತು ಬಾಳುವುದು ಧರ್ಮ. ಇಂತಹ ಪರಿಸ್ಥಿತಿಯಲ್ಲಿ ನಿನ್ನೆ ನಮ್ಮೊಡನೆ ಇದ್ದವರು ಇಂದು ನೆನಪಿನ ಬುತ್ತಿ ಸೇರಿಹೊಗುತ್ತಿದ್ದಾರೆ.ಅದೆಷ್ಟೋ ಮಂದಿ ಕೊರೊನಾದಿಂದಾಗಿ ಪ್ರಾಣತೆತ್ತಿದ್ದಾರೆ.ಮಾನವೀಯತೆ ತೋರಬೇಕಾದ ಸಮಯದಲ್ಲಿ ಸೋಂಕಿತರನ್ನು ಮನೆಯಿಂದ ಹೊರದಬ್ಬುವಂತೆ ಮಾಡುವುದು ಯಾವ ಧರ್ಮ. ಸೃಜನಾತ್ಮಕ ಪೂರ್ವಾಗ್ರಹ ಪೀಡಿತರಾಗದೇ ಮುಕ್ತವಾಗಿ ಆಲೋಚಿಸಬೇಕು ಎಂಬ ಸೂಕ್ಷ್ಮತೆ ನಮ್ಮ ಜನರಿಗೆ ಇಲ್ಲದಾಗಿದೆಯೇ.ಇಂದು ನಮ್ಮ ಮನೆಗೆ ಬಂದರೆ ನಾಳೆ ನಿಮ್ಮ ಮನೆ ಇದಕ್ಕೆ ಹೊರತಾಗಿದೆಯೇ ಎಂಬ ಕೊಂಚ ಆಲೋಚನೆ ಇಲ್ಲದಾಯಿತೇ ಎಂಬ ವಿಚಾರ ಕಾಡದಿರದು.
ಮನುಷ್ಯ ಜೀವನದಲ್ಲಿ ಪರಸ್ಪರ ಉತ್ತಮ ಸಂಬಂಧಗಳಿರಬೇಕಾಗುತ್ತದೆ. ಹಾಗಿದ್ದಾಗಲೇ ಶಾಂತಿ, ನೆಮ್ಮದಿ, ಶಿಸ್ತು ಇರುತ್ತವೆ. ಇದು ಎಲ್ಲರಲ್ಲಿಯೂ ಅವಶ್ಯವಾಗಿ ಇರಬೇಕಾದ ಗುಣ.ಧೈರ್ಯದಿಂದ ಅನೇಕ ಸಮಸ್ಯೆಗಳು ಮತ್ತು ಕಷ್ಟಗಳು ಪರಿಹಾರವಾಗುತ್ತವೆ. ದಿನನಿತ್ಯದ ಜೀವನವನ್ನು ಉತ್ತಮವಾಗಿ ಬದುಕಲು ಸಹಾಯ ಮಾಡುತ್ತದೆ. ಆದ್ದರಿಂದ ಅರಿತು ಬಾಳಬೇಕಲ್ಲವೇ…ಕೊನೆಗೂ ಆ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ.ತಮಗಾದ ನೋವಿನ ಆಳದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಇದೊಂದು ಅಮಾನವೀಯ ಘಟನೆ ನನ್ನ ಜೀವನದಲ್ಲಿ ನನಗೆ ತೀರಾ ಆತಂಕ ಮೂಡಿಸಿದೆ.ಇನ್ನಾದರೂ ಜನರ ಮನೋಭಾವ ಬದಲಾಗಲಿ.ಸರ್ಕಾರ ಹಾಗೂ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದರೂ ಕೂಡ ಕೆಲವರ ಮನಸ್ಥಿತಿ ಬದಲಾಗಿಲ್ಲ..ಅವರ ಮನೋಭಾವ ಬದಲಾಗಲಿ ಎಂದು ಆಶಿಸೋಣ..
– ಡಾ.ರಾಮಚಂದ್ರ ಕಾರಟಗಿ
ಕಾರಟಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ – ಹುಬ್ಬಳ್ಳಿ.
ಮೊ; 9449110517