ಮಹಾತ್ಮರ ದಿನವನ್ನ ರಜೆ ನೀಡದೆ ವಿದ್ಯಾರ್ಥಿಗಳಿಗೆ ಅವರ ತತ್ವ, ಸಿದ್ಧಾಂತಗಳನ್ನು ತಿಳಿಸಿ ಕೊಡುವ ಕೆಲಸ ಆಗಬೇಕು – ಹಿರಿಯ ವಕೀಲ ಎಲ್.ಎಚ್.ಅರುಣ ಕುಮಾರ್

IMG-20211002-WA0066

ದಾವಣಗೆರೆ: ಮಹಾತ್ಮ ಗಾಂಧೀಜಿ ಸೇರಿದಂತೆ ಮಹತ್ಮರ ದಿನವನ್ನು ಶಾಲೆಗಳಿಗೆ ರಜೆ ನೀಡಿ ಆಚರಿಸುವ ಬದಲು ರಜೆ ನೀಡದೇ ವಿದ್ಯಾರ್ಥಿಗಳಿಗೆ ಅವರ ತತ್ವ, ಸಿದ್ಧಾಂತಗಳನ್ನು ತಿಳಿಸಿ ಕೊಡುವ ಕೆಲಸ ಆಗಬೇಕು ಎಂದು ಹಿರಿಯ ವಕೀಲ ಎಲ್.ಎಚ್.ಅರುಣ ಕುಮಾರ್ ಹೇಳಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಯೂನಿಯನ್‌ನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ `ಗಾಂಧಿ ಮತ್ತು ಕೋಮು ಸೌಹಾರ್ದ’ ವಿಚಾರ ಸಂಕಿರಣ ಹಾಗೂ ಮನೆಗೆಲಸ, ಕಟ್ಟಡ ಕಾರ್ಮಿಕರಿಗೆ ಫುಡ್‌ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಭಾಟಿಸಿ ಅವರು ಮಾತನಾಡಿದರು.

ಗಾಂಧೀಜಿಯ ಚಿಂತನೆಗಳನ್ನು, ಅವರ ಸತ್ಯಾನ್ವೇಷಣೆಯ ಬದುಕಿನ ರೀತಿಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ವರ್ಷಗಳು ಕಳೆದಂತೆ ಗಾಂಧೀಜಿಯವರನ್ನು ಜನಮಾನಸದಿಂದ ಸರಿಸುವ ಪ್ರಯತ್ನಗಳಾಗುತ್ತಿವೆ. ಎಲ್ಲ ಕಾಲಕ್ಕೂ ಪ್ರಸ್ತುತರಾದ ಗಾಂಧಿಯವರನ್ನು ಈ ರೀತಿ ಮರೆಯಾಗಲು ಬಿಡಬಾರದು ಎಂದು ಹೇಳಿದರು.

ಪ್ರಜಾಪ್ರಭುತ್ವ ಮತ್ತು ಹಿಂಸೆ, ಒಳ್ಳೆಯ ಸರ್ಕಾರ ಮತ್ತು ಭ್ರಷ್ಟಾಚಾರ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ. ಗಾಂಧೀಜಿಯ ತತ್ವಕ್ಕೆ ವಿರುದ್ಧವಾಗಿ ಆಡಳಿತ ನಡೆಸುವವರು, ಅಧಿಕಾರಿಗಳು ಇದ್ದಾರೆ. ಸತ್ಯ, ಅಹಿಂಸೆ, ಜಾತ್ಯತೀತತೆ, ಕೋಮು ಸೌಹಾರ್ದಕ್ಕೆ ಮತ್ತೊಂದು ಹೆಸರಾದ ಗಾಂಧೀಜಿಯ ತತ್ವಗಳು ಆಡಳಿತ ನಡೆಸುವವರಿಗೆ ಪಾಠ ಆಗಬೇಕು ಎಂದರು.

ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಅನೀಸ್ ಪಾಷ ಮಾತನಾಡಿ, ಪ್ರೀತಿ, ಸೌಹಾರ್ದ, ಶಾಂತಿ, ಅಹಿಂಸೆಯಿAದ ಕಟ್ಟಿದ ದೇಶ ಉನ್ನತ ಸ್ಥಾನಕ್ಕೆ ಏರುತ್ತದೆ. ದ್ವೇಷದಿಂದ ದೇಶ ಕಟ್ಟಲು ಹೊರಟರೆ ಅದಕ್ಕೆ ದೀರ್ಘಾಯುಷ್ಯ ಇರುವುದಿಲ್ಲ. ಬ್ರಿಟಿಷರಿಂದ ವಿಮೋಚನೆ, ಹಸಿವು, ಬಡತನ, ಅಸಮಾನತೆ ವಿಮೋಚನೆ ಗಾಂಧೀಜಿಯ ಗುರಿಯಾಗಿತ್ತು. ಅದರಲ್ಲಿ ಬ್ರಿಟಿಷರಿಂದ ವಿಮೋಚನೆ ಮಾತ್ರ ಸಿಕ್ಕಿದ್ದು, ಹಸಿವು, ಬಡತನ, ಅಸಮಾನತೆಯಿಂದ ಇನ್ನೂ ವಿಮೋಚನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್, ಗಾಂಧೀಜಿ, ನೆಹರೂ ಅವರ ಸಿದ್ಧಾಂತಗಳಲ್ಲಿ, ಹೋರಾಟಗಳಲ್ಲಿ ವ್ಯತ್ಯಾಸ ಇರಬಹುದು. ಎಲ್ಲವನ್ನು ಗೌರವಿಸುತ್ತಾ, ಒಳ್ಳೆಯ ಅಂಶಗಳನ್ನು ನಾವು ಪಡೆದುಕೊಳ್ಳಬೇಕು. ದ್ವೇಷಿಸುವುದು ಅದಕ್ಕೆ ಪರಿಹಾರ ಅಲ್ಲ ಎಂದು ಸಲಹೆ ನೀಡಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ, ಮನೆಕೆಲಸದವರ ಯೂನಿಯನ್‌ನ ಲಕ್ಷ್ಮಮ್ಮ, ಬೀಡಿ ಕಾರ್ಮಿಕರ ಯೂನಿಯನ್‌ನ ಶಿರಿನ್ ಬಾನು, ಪ್ರಗತಿಪರ ಚಿಂತಕರಾದ ಅಬ್ದುಲ್ ಘನಿ ತಾಹೀರ್, ಬಾಲಕೃಷ್ಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!