ಮನುಷ್ಯ ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ: ಎಲ್. ಹೆಚ್. ಅರುಣಕುಮಾರ್

ದಾವಣಗೆರೆ: ಮನುಷ್ಯ ಹುಟ್ಟಿದ ತಕ್ಷಣ ವಿಶ್ವ ಮಾನನಾಗಿರುತ್ತಾನೆ. ಆದರೆ, ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ ಎಂದು ಹಿರಿಯ ನ್ಯಾಯವಾದಿ ಎಲ್.ಎಚ್.ಅರುಣಕುಮಾರ್ ಹೇಳಿದರು.

ನಗರದ ದೇವರಾಜ ಅರಸು ಬಡಾವಣೆಯ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಸಂಘದ ಕಚೇರಿಯಲ್ಲಿ ಯೂನಿಯನ್ ವತಿಯಿಂದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಏರ್ಪಡಸಿದ್ದ ವಿಶ್ವ ಮಾನವ ದಿನಾಚರಣೆ ಮತ್ತು ಪ್ರೊ.ಎಸ್.ಎಚ್.ಪಟೇಲ್ ಅವರ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟಿದ ಮಗುವಿಗೆ ಯಾವುದೇ ಜಾತಿ, ಮತಗಳ ಸೋಂಕು ಇರುವುದಿಲ್ಲ. ಹುಟ್ಟಿದಾಗ ವಿಶ್ವ ಮಾನವರಾಗಿರುತ್ತಾರೆ. ಆದರೆ, ಆ ಮಗು ಬೆಳೆಯುತ್ತಿದ್ದಂತೆ ಮನುಷ್ಯ ಜಾತಿ, ಮತ, ಭಾಷೆಗಳ ಸಂಕೋಲೆಯಿಂದ ಬಿಗಿದು, ಕುಬ್ಜರನ್ನಾಗಿಸುತ್ತಿದ್ದೇವೆ ಎಂದ ಅವರು, ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರು ಮಾನವತವಾದದ ಪ್ರತೀಕವಾಗಿದ್ದಾರೆ ಎಂದರು.

ಈಗ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಹೋಗುವುದನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆ ತಂದಿರುವ ರಾಜ್ಯ ಸರ್ಕಾರಕ್ಕೆ ಎಲ್ಲಾ ಧರ್ಮಗಳು ಮತಾಂತರದ ಮೂಲಕವೇ ಸ್ಥಾಪನೆಯಾಗಿರುವುದು ಎಂಬ ಸತ್ಯ. ಪಂಚಮಂತ್ರಗಳಾದ ಮನುಜ ಮತ ವಿಶ್ವ ಪಥ, ಸರ್ವೋದಯ, ಸಮನ್ವಯ, ಪೂರ್ಣದೃಷಿ ಇವು ನಮ್ಮ ಮುಂದಿನ ಪೀಳಿಗೆಗೆ ಆದರ್ಶವಾಗಬೇಕಿದೆ ಎಂದು ಹೇಳಿದರು.

ಪ್ರೋ.ಎಸ್.ಎಚ್.ಪಟೇಲರು ಕುವೆಂಪು ಅವರ ವಿಚಾರಧಾರೆಯಿಂದ ಪ್ರೇರೇಪಿತರಾಗಿದ್ದರು. ತಮ್ಮ ಜೀವಿತದವರೆಗೂ ಪ್ರಜಾಪ್ರಭುತ್ವದ ಪ್ರತಿಪಾದಕರಾಗಿ, ಮಾನವ ಹಕ್ಕುಗಳಿಗಾಗಿ ವೈಚಾರಿಕತೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದರು ಎಂದು ತಿಳಿಸಿದರು.

ಪೀಪಲ್ಸ್ ಲಾಯರ್‍ಸ್ ಗಿಲ್ಡ್‌ನ ಜಿಲ್ಲಾಧ್ಯಕ್ಷ ಅನೀಸ್ ಪಾಷಾ ಮಾತನಾಡಿ, ಹುಟ್ಟುವಾಗಲೇ ಯಾರೂ ಕೂಡ ಯಾವ ಮತಕ್ಕೂ ಸೇರಿರುವುದಿಲ್ಲ. ಪ್ರತಿಯೊಬ್ಬ ಮಾನವನ ಹೃದಯದಲ್ಲೂ ಅವನದೇ ಆದ ಧರ್ಮವಿದೆ. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹಲವಾರು ಮಹಾತ್ಮರು ಶ್ರಮಿಸಿದ್ದಾರೆ. ಮತ ಮನುಜ ಮತವಾಗಬೇಕು. ಪಥ ವಿಶ್ವಪಥವಾಗಬೇಕು. ಆ ಮೂಲಕ ವಿಶ್ವ ಮಾನವರಾಗಬೇಕಿದೆ ಎಂದು ಕರೆ ನೀಡಿದರು.

ಇದೇ ವೇಳೆ ವಿಶ್ವ ಮಾನವ ಮಂಟಪ ಟ್ರಸ್ಟ್ ಹೊರತಂದಿರುವ ರಾಷ್ಟ್ರ ಕವಿ ಕುವೆಂಪುರವರ ವಿಶ್ವ ಮಾನವ ಸಂದೇಶದ ಕರ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡ ಆವರಗೆರೆ ರುದ್ರಮುನಿ, ಆರ್.ಎಲ್.ಕಾನೂನು ಕಾಲೇಜು ಪ್ರಾಂಶುಪಾಲ ಸೋಮಶೇಖರಪ್ಪ, ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜ್, ಕಾರ್ಯದರ್ಶಿ ಎಂ.ಕರಿಬಸಪ್ಪ, ನಗೀನಾಬಾನು, ಗುಲ್ಜಾರ್ ಬಾನು ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!