ದಾವಣಗೆರೆ ಕರುನಾಡು ರಾಜಾಸ್ಥಾನಿ ಸಂಘದಿಂದ 25 ಮಂಗಳಮುಖಿಯರಿಗೆ ಫುಡ್ ಕಿಟ್ ವಿತರಣೆ
ದಾವಣಗೆರೆ : ಸರಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಂಗಳಮುಖಿಯರಿಗೆ ಸಂಘ ಸಂಸ್ಥೆಗಳು ನೆರವು ನೀಡಬೇಕೆಂದು ಕರುನಾಡು ರಾಜಾಸ್ಥಾನಿ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ತುಳಸಿರಾಮ್ ಟಿ. ಜಾಂಗಿಡ್ ಮನವಿ ಮಾಡಿದರು. ಕರುನಾಡು ರಾಜಾಸ್ಥಾನಿ ಸಂಘದ ವತಿಯಿಂದ ಕೋರೋನಾ ಲಾಕ್ಡೌನ್ನಿಂದ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಮಂಗಳಮುಖಿಯರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡುತ್ತಿದ್ದರು.
ಕಿಟ್ ವಿತರಣಾ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಅವರಗೆರೆ ಹೆಚ್.ಜಿ.ಉಮೇಶ್ ಮಾತನಾಡಿ ರಾಜ್ಯ ಸರಕಾರವು ಕೋರೋನಾ ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಹಲವಾರು ಕ್ಷೇತ್ರದ ಕಾರ್ಮಿಕರಿಗೆ, ದುಡಿಯುವ ವರ್ಗಕ್ಕೆ ವಿವಿಧ ರೀತಿಯಲ್ಲಿ ನೆರವು ನೀಡಿದೆ. ಆದರೆ ಕೋರೋನಾ ಸಾಂಕ್ರಾಮಿಕ ಕಾಯಿಲೆ ಆರಂಭಗೊಂಡ ದಿನದಿಂದಲೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಮಂಗಳಮುಖಿಯರ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ದಾವಣಗೆರೆ ಜಿಲ್ಲೆಯೊಂದರಲ್ಲಿಯೇ ಸಾವಿರಾರು ಮಂಗಳಮುಖಿಯರು ಇದ್ದಾರೆ. ಭಿಕ್ಷೆ ಬೇಡಿ ಜೀವನ ಸಾಗಿಸುವುದಕ್ಕೂ ಅವಕಾಶವಿಲ್ಲದಂತಾಗಿ ಇಂದು ಅವರುಗಳು ಅಕ್ಷರಶಃ ಒಪ್ಪೊತ್ತಿನ ಊಟಕ್ಕೂ ಸಹ ಪರಿಪಾಟಲು ಪಡುತ್ತಿದ್ದಾರೆ. ಅಂಥವರ ನೆರವಿಗೆ ಸರಕಾರ ಅಗತ್ಯವಾಗಿ ಬರಬೇಕಾಗಿತ್ತು. ಇನ್ನಾದರೂ ಸರಕಾರವು ಅವರ ನೋವಿಗೆ ಸ್ಪಂದಿಸಿ ಕೂಡಲೇ ಪ್ರತಿಯೊಬ್ಬ ಮಂಗಳಮುಖಿಯರಿಗೆ ತಲಾ ರೂ.10000/- ಸಹಾಯಧನವನ್ನು ಘೋಷಿಸಬೇಕು ಎಂದು ಕಾರ್ಮಿಕ ನಾಯಕ ಅವರಗೆರೆ ಹೆಚ್.ಜಿ.ಉಮೇಶ್ ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರುನಾಡು ರಾಜಸ್ಥಾನಿ ಸಂಘದ ಕಾರ್ಯದರ್ಶಿ ಜೈನ್ರಾಜ್ ಮೆಹೆತಾ ಹಾಗೂ ಖಜಾಂಚಿ ಸುರೇಶ್ ಕುಮಾರ್ ಸೋನಿಯವರು ಉಪಸ್ಥಿತರಿದ್ದು ಸುಮಾರು 25 ಮಂಗಳಮುಖಿಯರಿಗೆ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ನ್ನು ನೀಡಿದರು. ಮಂಗಳಮುಖಿಯರಾದ ನಂದನಮ್ಮ, ಸುರಕ್ಷಾ, ಜಾಹ್ನವಿ, ಧೀಕ್ಷಾ, ವೈಶಾಲಿ, ಸ್ಪಂದನ, ಧನ್ಯ, ಜಯ, ಪೂಜಾ ಮತ್ತು ಮಧುಮಿತಾ ಮುಂತಾದವರು ಇದ್ದರು.