ಮಂಗಳೂರಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆ : ಸಚಿವ ಅಂಗಾರ
ದಾವಣಗೆರೆ: ಮಂಗಳೂರಿನಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಹೇಳಿದರು
ರಾಜ್ಯದಲ್ಲಿ ಸುಮಾರು 320 ಕಿ.ಮೀ. ಕರಾವಳಿ ಪ್ರದೇಶ ಹೊಂದಿದ್ದು, ಮೀನುಗಾರಿಕೆ ವಿಸ್ತರಣೆಗೆ ಹೆಚ್ಚಿನ ಅವಕಾಶಗಳಿವೆ. ರಾಜ್ಯದಲ್ಲಿ ಮೀನುಗಾರಿಕೆ ಸಂಬಂಧಿಸಿದಂತೆ ಯಾವುದೇ ವಿಶ್ವವಿದ್ಯಾಲಯಗಳು ಇಲ್ಲದ ಕಾರಣ ಕರಾವಳಿ ಭಾಗದ ಜನರಿಗೆ ಮೀನುಗಾರಿಕೆಯ ಕೃಷಿಯಲ್ಲಿ ತುಂಬಾ ಸಮಸ್ಯೆಯಾಗಿದೆ.
ಆದ್ದರಿಂದ, ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಮೀನುಗಾರಿಕೆ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮ ಹಾಗೂ ಬಂದರು ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಹಾಗಾಗಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿಯೇ ಮಂಗಳೂರಿನಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಅಂಗಾರ ಹೇಳಿದರು.
ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಕರಾವಳಿ ಭಾಗದ ಮೀನುಗಾರಿಕೆ ಹೆಚ್ಚು ವೃದ್ಧಿಯಾಗುವುದಲ್ಲದೆ ಉದ್ಯೋಗ ಮತ್ತು ಆದಾಯ ಹೆಚ್ಚಳಕ್ಕೂ ಸಹಕಾರಿಯಾಗಲಿದೆ. ಈಗಾಗಲೆ 1200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಸಾಗರಮಾಲ ಮತ್ತು ಮತ್ಸ್ಯ ಸಂಪದ ಯೋಜನೆಗಳಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಯಾವುದೇ ಸಮಸ್ಯೆಗಳು ಬಂದರೂ ಅವುಗಳನ್ನು ಪರಿಹರಿಸಿ, ಮಂಗಳೂರಿನಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಸಚಿವ ಎಸ್. ಅಂಗಾರ ಹೇಳಿದರು.
ಮೀನುಗಾರಿಕೆ ಇಲಾಖೆ ಹರಿಹರದ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ಕೊಂಡಜ್ಜಿ ಮೀನುಮರಿ ಪಾಲನಾ ಕೇಂದ್ರದ ಅಭಿವೃದ್ಧಿಗೆ ಈಗಾಗಲೆ 73 ಲಕ್ಷ ರೂ. ಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಮಂಜೂರಾತಿಗಾಗಿ ಸಲ್ಲಿಸಲಾಗಿದೆ ಎಂದರು.
ಮೀನುಗಾರಿಕೆ ಇಲಾಖೆ ಶಿವಮೊಗ್ಗದ ಜಂಟಿನಿರ್ದೇಶಕ ಉಮೇಶ್, ದಾವಣಗೆರೆ ಉಪನಿರ್ದೇಶಕ ಗಣೇಶ್, ಚನ್ನಗಿರಿ ಸಹಾಯಕ ನಿರ್ದೇಶಕಿ ದೀಪಶ್ರೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.