ಡ್ರಾಗನ್ ಬೆಳೆದ ಮಂಜಣ್ಣ , ಕೈ ತುಂಬಾ ಮನಿ ನೋಡ್ರಣ್ಣ
ದಾವಣಗೆರೆ : ಕೈ ತುಂಬಾ ಕಾಸು ತರುವ ಅಡಿಕೆ ಬೆಳೆ ಬೆಳೆಯುವವರ ನಡುವೆ ಇಲ್ಲೊಬ್ಬ ರೈತ, ವಿದೇಶಿ ಬೆಳೆ ಬೆಳೆದು ಕೈ ತುಂಬಾ ಹಣ ನೋಡುತ್ತಿದ್ದಾರೆ. ಇದು… ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಸಿದ್ದನೂರು ಗ್ರಾಮದ ಮಂಜಣ್ಣ ಎಂಬಾತ ರೈತನೇ ಈ ಕಥೆಯ ನಾಯಕ. ಇವರೇ ಈ ಕಥೆಯ ರೂವಾರಿಯಾಗಿದ್ದು, ಡ್ರಾಗನ್ ಪ್ರೂಟ್ ಬೆಳೆದು ಕಡಿಮೆ ಬಂಡವಾಳದಲ್ಲಿ ಹೆಚ್ಚು ಹಣ ಗಳಿಸುತ್ತಿದ್ದಾರೆ.
ಇವರು ಸದಾ ಒಂದಿಲ್ಲೊಂದು ಪ್ರಯೋಗ ಮಾಡುತ್ತಲೇ ಇರುವ ವ್ಯಕ್ತಿ.. ಅಂತೆಯೇ ಮಹಾರಾಷ್ಟ್ರ ಕ್ಕೆ ಹೋಗಿ ಡ್ರ್ಯಾಗನ್ ಸಸಿಗಳನ್ನು ತಂದು ಇಡೀ ಜಿಲ್ಲೆಯಲ್ಲಿ ಮೊದಲು ಪ್ರಯೋಗ ಮಾಡಿದರು. ಅಂತೆಯೇ ಅದರಲ್ಲಿ ಯಶಸ್ವಿಯಾದರು. ಡ್ರ್ಯಾಗನ್ ಫ್ರೂಟ್ಸ್ ವಾರ್ಷಿಕ ಬೆಳೆಯಾಗಿದ್ದು ಮಹಾರಾಷ್ಟ್ರ, ವಿಜಯಪುರ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ಈ ಬೆಳೆಯನ್ನು ಸಿದ್ದನೂರು ಮಂಜಣ್ಣ ಮೊದಲ ಪ್ರಯೋಗ ಮಾಡಿದ್ದರು. ಪ್ರತಿ ಗಿಡಕ್ಕೆ 25 ರಿಂದ 30 ಕೆಜಿ ಹಣ್ಣು ಸಿಗುವುದು ಇದರ ವಿಶೇಷ. ಈ ಗಿಡ ಸುಮಾರು 400 ರಿಂದ 500 ಗ್ರಾಂ ತೂಕದ ಹಣ್ಣು ಬಿಡಲಿದ್ದು, ಪ್ರತಿ ಹಣ್ಣಿಗೆ ಗರಿಷ್ಟ 80 ರಿಂದ 100 ರೂ. ಸಿಗಲಿದೆ.ವಾರ್ಷಿಕ ಸುಮಾರು 5 ಲಕ್ಷ ರೂ. ಆದಾಯ ಗಳಿಸಬಹುದಾಗಿದೆ.
ಇವರು ಓದಿದ್ದು ಎಸ್ಸೆಸ್ಸೆಲ್ಸಿಯಾಗಿದ್ದು, ಒಂದು ಎಕರೆ ಜಮೀನಿನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಕೇವಲ ನಾಲ್ಕು ಲಕ್ಷ ರೂಪಾಯಿ ಬಂಡವಾಳ ಹಾಕಿ, ಐದು ವರ್ಷದಲ್ಲಿ 20 ರಿಂದ 25 ಲಕ್ಷ ಆದಾಯ ಗಳಿಸಿದ್ದು, ಖಾಸಗಿ ಕಂಪನಿಗಳ ಕಚೇರಿಗೆ ಉದ್ಯೋಗಕ್ಕಾಗಿ ಅಲೆದಾಡುವ ಯುವಕರಿಗೆ ಮಾದರಿಯಾಗಿ ನಿಂತಿದ್ದಾರೆ. ಈ ಮೂಲಕ ಕೃಷಿ ಎಂದರೆ ನಷ್ಟ ಎಂಬ ಮಾತನ್ನು ಸುಳ್ಳು ಮಾಡಿದ್ದಾರೆ.
ತಮ್ಮ 1 ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಈ ಹಣ್ಣು ತಿಂದರೆ ಐಸ್‌ಕ್ರೀಂ ತಿಂದಂತಾಗುವ ಅನುಭವ ಇರುತ್ತದೆ. ಸದ್ಯ ಹುಬ್ಬಳ್ಳಿ, ಬೆಂಗಳೂರು, ಮುಂಬಯಿ, ದಾವಣಗೆರೆ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಈ ರೈತ ಬೆಳೆದ ಹಣ್ಣುಗಳು ಮಾರಾಟ ಆಗುತ್ತದೆ. ಪಾಪಾಸ್ ಕಳ್ಳಿ (cactus) ಜಾತಿಗೆ ಸೇರಿದ ಗಿಡವಾಗಿರುವುದರಿಂದ ಇದನ್ನು ಒಮ್ಮೆ ನೆಟ್ಟರೆ ಸಾಯುವುದಿಲ್ಲ. ಗಿಡ ನೆಡುವಾಗ ಮಾತ್ರ ಹೆಚ್ಚು ಖರ್ಚಾಗುತ್ತದೆ. ಬಳಿಕ ಪ್ರತಿ ವರ್ಷ ಎಕರೆಗೆ ಹೆಚ್ಚೆಂದರೆ 15 ಸಾವಿರ ವೆಚ್ಚವಾಗಬಹುದು. ನಿರಂತರ 20 ವರ್ಷ ಈ ಹಣ್ಣಿನಿಂದ ಆದಾಯ ಬರುತ್ತದೆ. ಗಿಡ ಕೂಡ ಚೆನ್ನಾಗಿ ಇರುತ್ತದೆ. ಇದರಗಿಡ ನೆಟ್ಟಗೆ ನಿಂತು ಹರಡಿಕೊಳ್ಳಲು ಕಲ್ಲಿನ ಕಂಬ ಹಾಕಿ ದಾಯ ಮಾಡಿ ಡ್ರೀಪ್ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದಾರೆ. ಒಂದು ಗಿಡಕ್ಕೆ 600ಕ್ಕೂ ಅಧಿಕ ವೆಚ್ಚ ಮಾಡಿದ್ದು, ಎಕರೆಗೆ 400 ಗಿಡಗಳು ಕೂತುಕೊಳ್ಳುತ್ತವೆ.
ಕಡಿಮೆ ತೇವಾಂಶ ಇರುವ ಬಯಲು ಸೀಮೆಯಲ್ಲೂ ಈ ಬೆಳೆಯನ್ನು ಬೆಳೆಯಬಹುದು ಎಂಬುದನ್ನು ಇವರು ಸಾಬೀತು ಮಾಡಿದ್ದಾರೆ. ಒಣ ಭೂಮಿಯಲ್ಲಿ ತೇವಾಂಶ ಕಡಿಮೆ ಇದ್ದರೂ ಡ್ರ್ಯಾಗನ್ ಫ್ರೂಟ್ಸ್‌ನ್ನು ಬೆಳೆದು ಹೆಚ್ಚು ಆದಾಯ ಪಡೆಯಬಹುದಾಗಿದೆ. ಇನ್ನು ಹೆಚ್ಚು ಶೀತವಿದ್ದರೆ ಇಳುವರಿ ಕಡಿಮೆ ಆಗಲಿದ್ದು, ಕಡಿಮೆ ತೇವಾಂಶ ಇರುವ ಒಣ ಭೂಮಿ ಈ ಬೆಳೆಗೆ ಸೂಕ್ತವಾಗಿದೆ.