ಮಂಜು: 260ಕ್ಕೂ ಹೆಚ್ಚು ರೈಲುಗಳು ರದ್ದು
ನವದೆಹಲಿ: 260ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಸೋಮವಾರ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ದಟ್ಟ ಮಂಜಿನಿಂದ ಕೂಡಿದ ವಾತಾವರಣವಿದ್ದ ಕಾರಣ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿರುವ ಇಲಾಖೆ ಅಧಿಕಾರಿಗಳು, 82 ಎಕ್ಸ್‌ಪ್ರೆಸ್ ರೈಲುಗಳ, 140 ಪ್ಯಾಸೆಂಜರ್ ರೈಲುಗಳ ಮತ್ತು 40 ಉಪನಗರ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗುಲ್‌ಮಾರ್ಗ್, ಸೋನಮಾರ್ಗ್ ಮೊದಲಾದೆಡೆ ಹಿಮಪಾತ ಹೆಚ್ಚಾಗಿದೆ ಎಂದೂ ಹೇಳಿದ್ದಾರೆ.
ದೆಹಲಿಯಲ್ಲಿ ಐದನೇ ದಿನವೂ ಶೀತಗಾಳಿ ಮುಂದುವರಿದಿದ್ದು, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಕ್ಕಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ.
30 ವಿಮಾನಗಳ ಸಂಚಾರ ವಿಳಂಬವಾಗಿದೆ ಎಂದು ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಮತ್ತು ವಾಯವ್ಯ ಭಾರತದಲ್ಲಿ ಅತಿಯಾದ ಚಳಿ ಹಾಗೂ ದಟ್ಟ ಮಂಜು ಮುಸುಕಿದ ವಾತಾವರಣ ಮುಂದುವರಿದಿದೆ.
ಒಡಿಶಾದಲ್ಲೂ ಶೀತಗಾಳಿ ಬೀಸುತ್ತಿದ್ದು, ಸಿಮಿಲಿಗುಡದಲ್ಲಿ 3.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.