ಮಂತ್ರಿಮಂಡಲದಲ್ಲಿ ಭೋವಿ ಸಮಾಜ ಶಾಸಕರ ಕಡೆಗಣನೆಗೆ ಜಿಲ್ಲಾ ಭೋವಿ ಸಂಘ ಖಂಡನೆ

ದಾವಣಗೆರೆ: ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಸರ್ಕಾರ ರಚಿಸಲು ಪಕ್ಷೇತರ ಭೋವಿ ಜನಾಂಗದ ಶಾಸಕರು ಬೆಂಬಲಿಸಿ ಸಹಕರಿಸಿದ ಕಾರಣಕ್ಕೆ ಆಡಳಿತ ನಡೆಸಲು ಸಾಧ್ಯವಾಯಿತು. ಅಂತಹ ಭೋವಿ ಜನಾಂಗವನ್ನು ಮಂತ್ರಿಮಂಡಲ ರಚಿಸುವ ಸಂದರ್ಭದಲ್ಲಿ ಕಡೆಗಣಿಸಿರುವ ಬಿಜೆಪಿ ಪಕ್ಷದ ನಿಲುವನ್ನು ಜಿಲ್ಲಾ ಭೋವಿ ಸಂಘ ಖಂಡಿಸುತ್ತದೆ.
ಸರ್ಕಾರ ರಚಿಸಲು ಎರಡನೇ ಅವಧಿಯಲ್ಲೂ ಪರೋಕ್ಷವಾಗಿ ಅತಿಹೆಚ್ಚು ಕಾರ್ಯತಂತ್ರ ರೂಪಿಸಿದ ಭೋವಿ ಜನಾಂಗದ ರೂವಾರಿ ಜನ ನಾಯಕರನ್ನು ಮಂತ್ರಿ ಮಂಡಲದಲ್ಲಿ ಕೈಬಿಟ್ಟಿರುವುದು ದುರಂತದ ಸಂಗತಿಯಾಗಿದೆ. ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ಬೆಳೆಸುವ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿ ನಡೆ ಸಮುದಾಯವನ್ನು ವಿಚಲಿತಗೊಳಿಸಿವೆ.
2019ರಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಂತ್ರಿಮಂಡಲ ರಚಿಸುವ ಸಂದರ್ಭದಲ್ಲಿ ಜನಾಂಗವನ್ನು ಕಡೆಗಣಿಸಿ 6 ತಿಂಗಳಿಗಷ್ಟೆ ಮಂತ್ರಿಮಾಡಿದ್ದು, ಭೋವಿ ಜನಾಂಗದ ಮೇಲಿನ ಬಿಜೆಪಿ ಮಲತಾಯಿ ಧೋರಣೆ ಎದ್ದು ತೋರುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಭೋವಿ ಜನಾಂಗಕ್ಕೆ ಟಿಕೇಟ್ ನೀಡದೇ ಅವಮಾನಿಸಿದೆ. ಕೆ.ಪಿ.ಎಸ್.ಸಿಯಲ್ಲಿ ಸದಸ್ಯರನ್ನು ನೇಮಕ ಮಾಡದೇ ಸಬೂಬು ಹೇಳುತ್ತಿರುವುದು. ಮತ್ತೊಂದು ಕಡೆ ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡದೇ ತಳ್ಳುತ್ತಿರುವುದು ನೋಡಿದರೆ ಭೋವಿ ಜನಾಂಗವನ್ನು ಬಿಜೆಪಿ ಪಕ್ಷ ತನ್ನ ಅಭಿವೃದ್ಧಿಗಾಗಿ ಬಳಸಿಕೊಂಡು ರಾಜಕೀಯ ನಾಯಕರನ್ನು ಕಡೆಗಣಿಸುತ್ತಿರುವುದು ದುರಂತದ ಸಂಗತಿಯಾಗಿದೆ.
ಭೋವಿ ಜನಾಂಗದ ನಾಯಕರು ವಲಿಸಿಗರಿಗಾಗಿ ಕ್ಷೇತ್ರವನ್ನೇ ತ್ಯಾಗಮಾಡಿ ಬಿಜೆಪಿ ಪಕ್ಷದ ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲುವವರನ್ನೇ ನಿರ್ಲಕ್ಷ್ಯ ಧೋರಣೆಯಿಂದ ನಡೆಸಿಕೊಳ್ಳುತ್ತಿರುವುದು ಮತ್ತು ಆ ಜನಾಂಗದ ನಾಯಕರುಗಳ ಬೆಳವಣಿಗೆಯನ್ನು ತಡೆಯುತ್ತಿರುವ ಬಿಜೆಪಿ ಪಕ್ಷದ ನಡೆ ತೀವ್ರ ಖಂಡನೀಯ.
ಸತ್ಯ, ನಿಷ್ಠೆ, ಪ್ರಮಾಣಿಕತೆ ಬಗ್ಗೆ ಮಾತನಾಡುವ ಬಿಜೆಪಿ ಪಕ್ಷದ ಮತ್ತು ವಕ್ತಾರರು ಮತ್ತು ನಾಯಕರು ಈ ರೀತಿಯ ಧೋರಣೆಯಿಂದ ಪ್ರಮಾಣಿಕ ಮತ್ತು ನಿಷ್ಠೆಯಿಂದ ನಡೆದುಕೊಳ್ಳುವ ಭೋವಿ ಜನಾಂಗದ ನಾಯಕರನ್ನು ಮಲತಾಯಿ ಧೋರಣೆಯಿಂದ ಹೊರಗಿಡುತ್ತಿರುವುದು ಪಕ್ಷದ ಬೆಳವಣಿಗೆಗೆ ಶೋಭೆತರುವಂತದ್ದಲ್ಲ. ಇದೇ ರೀತಿ ಬಿಜೆಪಿ ಪಕ್ಷ, ಪಕ್ಷಕ್ಕಾಗಿ ದುಡಿದವರ ಬೆನ್ನು ಮುರಿಯುವ ಕೆಲಸವನ್ನು ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಪಕ್ಷದ ವಿರುದ್ದ ಈ ಜನಾಂಗ ಒಕ್ಕೊರಲಿನಿಂದ ಹೋರಾಟ ನಡೆಸಲು ಮುಂದಾಗುತ್ತೇವೆಂದು ಎಚ್ಚರಿಸುತ್ತಿದ್ದೇವೆ.
ಸಭೆಯಲ್ಲಿ ಜಿಲ್ಲಾ ಭೋವಿ ಸಮಾಜದ ಕಾರ್ಯಧ್ಯಕ್ಷರಾದ ಜಯಣ್ಣ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶ್ರೀನಿವಾಸ್, ಇಂಜಿನಿಯರ್ ವೆಂಕಟೇಶ್, ಮುಖಂಡರಾದ ಚಂದ್ರಪ್ಪ, ಮೂರ್ತ್ಯಪ್ಪ, ಕೇಶವಮೂರ್ತಿ, ಎಸ್ ಬಸವರಾಜ್, ಗೋವಿಂದಪ್ಪ, ಬ್ಯಾಂಕ್ ರಾಮಪ್ಪ, ದ್ಯಾಮಣ್ಣ ಶಾಮಸುಂದರ, ಗಣೇಶ್, ಹರಪನಹಳ್ಳಿ ತಾಲ್ಲೂಕು ಭೋವಿ ಸಂಘದ ಅಧ್ಯಕ್ಷರಾದ ಎಂ.ಬಿ.ಅಂಜಿನಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಪಿ ನಾಗಪ್ಪ, ಉಪಾಧ್ಯಕ್ಷರಾದ ಚಿಗಟೇರಿ ಚಂದ್ರಶೇಖರಪ್ಪ, ಹನುಮಂತಪ್ಪ, ಶಿವಪ್ಪ, ಉಮಾಪತಿ, ಸಂಘನಾ ಕಾರ್ಯದರ್ಶಿ ವಿ.ತಿರುಪತಿ, ಹುಚ್ಚಂಗಿದುರ್ಗ ರಾಮಜ್ಜ, ದುರ್ಗಪ್ಪ, ಶಿಕ್ಷಕ ಹನುಮಂತಪ್ಪ ಇನ್ನಿತರರು ಉಪಸ್ಥಿತರಿದ್ದರು.