ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಕ್ರಿಶ್ಚಿಯನ್ನರ ಪ್ರತಿಭಟನೆ

ದಾವಣಗೆರೆ: ರಾಜ್ಯ ಸರ್ಕಾರದ ಉದ್ದೇಶಿತ ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಕ್ರಿಶ್ಚಿಯನ್ ವೆಲ್‌ಫೇರ್ ಅಸೋಸಿಯೇಷನ್, ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಹಾಗೂ ದಾವಣಗೆರೆ ಕ್ರಿಶ್ಚಿಯನ್ ಪರಿಷತ್ ಸಂಘಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಅಸೋಸಿಯೇಷನ್ ಅಧ್ಯಕ್ಷ ಫಾಸ್ಟರ್ ರಾಜಶೇಖರ್ ಮಾತನಾಡಿ, ಇತ್ತೀಚೆಗೆ ಅನ್ಯ ಸಮುದಾಯದವರು ಕ್ರಿಶ್ಚಿಯನ್ ಚರ್ಚುಗಳಿಗೆ ಅಕ್ರಮವಾಗಿ ಪ್ರವೇಶ ಮಾಡಿ, ಅಲ್ಲಿನ ಫಾದರ್‌ಗಳಿಗೆ ಮತ್ತು ಏಸು ಭಕ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಆದ್ದರಿಂದ, ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು ಕಾಯ್ದೆಯಲ್ಲಿ ಕ್ರಿಶ್ಚಿಯನ್ನರನ್ನೇ ನೇರವಾಗಿ ಗುರಿ ಮಾಡಿ ಕಾಯ್ದೆ ಜಾರಿಗೆ ತರಲು ಹೊರಟಿದೆ. ಇದರಿಂದ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಾಗುವ ಸಂಭವವಿದೆ. ಆದ್ದರಿಂದ, ಕಾಯ್ದೆ ಜಾರಿಗೊಳಿಸಬಾರದೆಂದು ಆಗ್ರಹಿಸಿದರು.
ಫಾದರ್ ಡಾ.ಅಂಥೋನಿ ಪೀಟರ್ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಕ್ರಿಶ್ಚಿಯನ್ನರ ಜನಸಂಖ್ಯೆ ಶೇ.೨ ರಷ್ಟಿತ್ತು. ಆದರೆ, ಈಗ ಶೇ.೧.೮ ರಷ್ಟಿದೆ. ಹಾಗೇನಾದರೂ ಮತಾಂತರವಾಗಿದ್ದರೆ ಹೆಚ್ಚಳವಾಗಬೇಕಿತ್ತು. ಹಾಗೆ ಯಾವುದೇ ಮತಾಂತರ ನಡೆದಿಲ್ಲ. ನಾವೆಲ್ಲರೂ ಅಲ್ಪಸಂಖ್ಯಾತರಾಗಿ ಸವಲತ್ತುಗಳನ್ನು ಪಡೆಯುತ್ತಿದ್ದೇವೆ ಎಂದರು.
ಫಾಸ್ಟರ್ ಪ್ರೇಮ್ ಕುಮಾರ್, ಮೇಸಸ್ ಅಮನ್ನಾ, ಅಲೆಗ್ಸಾಂಡರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.