ಮಠಾಧೀಪತಿಗಳು ಆರ್ ಎಸ್ ಎಸ್ ನವರಿಗೆ ಲಿಂಗ ಕಟ್ಟುವ ಮೂರ್ಖತನದ ಕೆಲಸ ಮಾಡುತ್ತಿದ್ದಾರೆ – ಡಾ. ಸಿದ್ದನಗೌಡ ಪಾಟೀಲ್ ವಾಗ್ದಾಳಿ

ದಾವಣಗೆರೆ: ಮಠಾಧೀಪತಿಗಳು ಮಠಗಳನ್ನು ಅನ್ನ, ಶಿಕ್ಷಣ ದಾಸೋಹ, ಕೋವಿಡ್ ಕೇಂದ್ರಗಳಾಗಿ ಮಾಡಿ ಸೇವೆ ನೀಡುವುದು ಬಿಟ್ಟು, ರಾಜಕೀಯ ಕ್ಷೇತ್ರದಲ್ಲಿ ಮೂಗು ತೂರಿಸಿ, ಇಂತಹವರನ್ನೇ ಮುಖ್ಯಮಂತ್ರಿ, ಸಚಿವರನ್ನು ಮಾಡಿ ಎನ್ನುತ್ತಾ ಆರ್‌ಎಸ್‌ಎಸ್‌ನವರಿಗೆ ಲಿಂಗ ಕಟ್ಟುವ ಮೂರ್ಖತನದ ಕೆಲಸ ಮಾಡುತ್ತಿದ್ದಾರೆ ಎಂದು ಸಿಪಿಐ ರಾಜ್ಯ ಮುಖಂಡ ಡಾ. ಸಿದ್ದನಗೌಡ ಪಾಟೀಲ್ ವಾಗ್ದಾಳಿ ನಡೆಸಿದರು.
ಜಿಲ್ಲಾ ಭಾರತ್ ಕಮ್ಯುನಿಸ್ಟ್ ಪಕ್ಷದಿಂದ ಇಲ್ಲಿನ ಪಂಪಾಪತಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಾಂದೋಲನ ಜಾಗೃತಿ ಸಭೆಯಲ್ಲಿ ‘ಅಧಿಕಾರದಿಂದ ತೊಲಗಿಸಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಮಠಾಧೀಶರಾದವರು ಜಾತ್ಯಾತೀತ ಆಗಿರಬೇಕು. ಆದರೆ, ಈಗವರಿಗೆ ರಾಜಕಾರಣದ ಆಸೆ ಮೊಳೆತಂತಿದೆ. ಅದಕ್ಕೆ ಲಿಂಗಾಯತರೆ ಮುಖ್ಯಮಂತ್ರಿ ಮತ್ತು ಸಚಿವರಾಗಬೇಕು ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.
ದೇಶದಲ್ಲಿ ಮೋದಿ ನೇತೃತ್ವದ ಕೇಂದ್ರಸರ್ಕಾರ ಶಿಕ್ಷಣ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಪೋರೇಟ್ ಕಂಪನಿಗಳ ಒಕ್ಕಲುತನ ಮಾಡುತ್ತಿದೆ. ಬಂಡವಾಳಷಾಹಿಗಳ ಅನುಕೂಲಕ್ಕೆ ನಮ್ಮ ದೇಶವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಶೇ.85ರಷ್ಟು ರೈತರು ತುಂಡುಭೂಮಿ ಹೊಂದಿದ್ದು, ಕೃಷಿ ಕಾಯ್ದೆ ತಿದ್ದುಪಡಿ ಮಸೂದೆಯಲ್ಲಿ ಅವರಿಂದ ತುಂಡು ಭೂಮಿಯನ್ನು ಕಸಿದುಕೊಂಡು ಬಂಡವಾಳಷಾಹಿಗಳಿಗೆ ಒಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸ್ ಅವರು ‘ಉಳುವವನೇ ಭೂಮಿಯ ಒಡೆಯ’ ಎಂದಿದ್ದರು. ಅದೀಗ ಉಳುವವರಿಗೆ ಭೂಮಿ ಹೋಗಿ ಆಳುವವರಿಗೆ ಭೂಮಿ ಎನ್ನುವಂತಾಗಿದೆ. ಒಟ್ಟಿನಲ್ಲಿ ಮೋದಿ ಸರ್ಕಾರ ಕೃಷಿಯಿಂದ ಕೃಷಿಕರನ್ನು ಹೊರಗಟ್ಟುವ ಹುನ್ನಾರ ನಡೆಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಪಿಎಂಸಿಯಲ್ಲಿ ಸ್ಪರ್ಧಾತ್ಮಕ ಬೆಲೆ ನಿಗದಿಯಾಗುತ್ತದೆ. ಅದರಿಂದ ರೈತರಿಗೆ ಅನುಕೂಲವಾಗುತ್ತದೆ. ಆದರೆ, ಈಗ ಜಾರಿಗೆ ತಂದಿರುವ ಎಪಿಎಂಸಿ ಮಸೂದೆ ತಿದ್ದುಪಡಿಯಿಂದಾಗಿ ವ್ಯಾಪಾರಸ್ಥರೇ ದರ ನಿಗದಿ ಮಾಡುವಂತಾಗಿ ರೈತರಿಗೆ ಲಾಭ ಸಿಗದಂತಾಗಲಿದೆ. ಮೋದಿ ಸರ್ಕಾರ ಕರೋನಾ ಹೆಸರಲ್ಲಿ ಜನರು ಪ್ರತಿಭಟಿಸದಂತೆ ಲಾಕ್‌ಡೌನ್ ಮಾಡಿ, ಸಚಿವ ಸಂಪುಟ ಸಭೆ ಕರೆಯದೆ ಇಂತಹ ತಿದ್ದುಪಡಿಗಳನ್ನು ಜಾರಿಗೆ ತಂದಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಕೃಷಿ, ವಿದ್ಯುತ್, ಶಿಕ್ಷಣ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಪೋರೇಟ್ ಕಂಪನಿಗಳ ‘ಒಕ್ಕಲುತನ’ ಮಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರು ಪ್ರತಿಭಟಿಸದಂತೆ ವಾತಾವರಣ ನಿರ್ಮಾಣ ಮಾಡಿದೆ. ಕರೋನಾ ಸಂದರ್ಭವನ್ನೇ ಬಳಸಿಕೊಂಡು ಮಕ್ಕಳಿಗೆ ‘ಆನ್‌ಲೈನ್’ ಶಿಕ್ಷಣ ಪ್ರಾರಂಭಿಸಿ ಮಕ್ಕಳಿಗೆ ಮಾನಸಿಕವಾಗಿ ತಯಾರಿ ಮಾಡಲಾಗಿದ್ದು, ಮುಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಇದನ್ನೇ ಮುಂದುವರೆಸಿ ಬಂಡವಾಳಷಾಹಿಗಳನ್ನು ಶಿಕ್ಷಣ ಕ್ಷೇತ್ರಕ್ಕೆ ತರುವ ಸಂಚು ನಡೆಸಿದೆ ಎಂದು ಆರೋಪಿಸಿದರು.
ಕರೋನಾ ತಡೆಯುವಲ್ಲಿ ಕೇಂದ್ರದ ವಿಫಲತೆಯಿಂದಾಗಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳು ಗಗನಮುಖಿಯಾಗಿವೆ. ಜನರು ಪರದಾಡುವಂತಾಗಿದೆ. ಕರೋನಾ ನಿಯಂತ್ರಣವನ್ನು ಕೇಂದ್ರ ಹೇಗೆ ಮಾಡಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಆವರಗೆರೆ ಉಮೇಶ್ ಮಾತನಾಡಡಿದರು, ಸಭೆಯಲ್ಲಿ ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ಪ್ರಾಸ್ತಾವಿಕ ಮಾತನಾಡಿದರು, ಹಿರಿಯ ಕಾರ್ಮಿಕ ಮುಖಂಡ ಆನಂದ್‌ರಾಜ್ ಅಧ್ಯಕ್ಷತೆ ವಹಿಸಿದ್ದರು, ಆವರಗೆರೆ ಚಂದ್ರು, ಎಂ.ಬಿ. ಶಾರದಮ್ಮ, ಮಹಾಮದ್ ಬಾಷಾ, ಟಿ.ಹೆಚ್. ನಾಗರಾಜ್, ಮಹಮದ್ ರಫೀಕ್, ಜಿ. ಯಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.