ದಾವಣಗೆರೆ ಲೋಕಸಭಾ ಚುನಾವಣೆ ಅಭ್ಯರ್ಥಿಗಳೊಂದಿಗೆ ಸಭೆ, ಕ್ಷೇತ್ರದಲ್ಲಿ 17,09,244 ಮತದಾರರು ಮನೆಯಿಂದ ಮತದಾನ ಏಪ್ರಿಲ್ 25 ರಿಂದ 27 ರ ವರೆಗೆ 2262 ಮತದಾರರು ನೊಂದಣಿ
ದಾವಣಗೆರೆ; ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು ಮನೆಯಲ್ಲಿಯೇ ಮತದಾನ ಪ್ರಕ್ರಿಯೆ ಏಪ್ರಿಲ್ 25 ರಿಂದ 27 ರ ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಏಜೆಂಟರೊಂದಿಗೆ ನಡೆಸಲಾದ ಸಭೆಯಲ್ಲಿ ಮಾತನಾಡಿದರು. 85 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನ ಮತದಾರರಿಗೆ ಮನೆಯಲ್ಲಿಯೇ ಮತದಾನ ಮಾಡಲು ಆಯೋಗ ಅವಕಾಶ ಕಲ್ಪಿಸಿದೆ. ಈಗಾಗಲೇ ಮತದಾರರ ಮನೆಬಾಗಿಲಿಗೆ ಬಿ.ಎಲ್.ಓ. ತೆರಳಿ ಇಆರ್‍ಓ ನೆಟ್‍ನಲ್ಲಿ ನೊಂದಾಯಿಸಿ ನಮೂನೆ-12ಡಿ ರಡಿ ಘೋಷಣಾ ಪತ್ರ ಪಡೆದು ಮಾರ್ಕ್ ಮಾಡಲಾಗಿದೆ.
ಮನೆಯಲ್ಲಿ ಮತದಾನ ಮಾಡುವವರು; ಕ್ಷೇತ್ರದಲ್ಲಿ ವಿಶೇಷಚೇತನರು 804, ಹಿರಿಯ ನಾಗರಿಕರಾದ 85 ವರ್ಷ ಮೇಲ್ಪಟ್ಟವರು 1458 ಮತದಾರರು ನೊಂದಾಯಿಸಿದ್ದು ಏಪ್ರಿಲ್ 25 ರ ಬೆಳಗ್ಗೆ 9 ಗಂಟೆಯಿಂದ ಮನೆಯಲ್ಲಿಯೇ ಮತದಾನ ಆರಂಭವಾಗಲಿದೆ. ಇದು ಏ.26 ಮತ್ತು ಕೊನೆಯ ಭೇಟಿಯಾಗಿ ಏ.27 ರವರೆಗೆ ನಡೆಯಲಿದೆ. ಮನೆಯಲ್ಲಿಯೇ ಮತದಾನ ಮಾಡಲು ಪ್ರತಿ ತಂಡದಲ್ಲಿ ಸೆಕ್ಟರ್ ಅಧಿಕಾರಿ, ಮತಗಟ್ಟೆ ಅಧಿಕಾರಿ, ಮತದಾನ ಅಧಿಕಾರಿ, ಮೈಕ್ರೋ ಅಬ್ಸರ್‍ವರ್, ವೀಡಿಯೋಗ್ರಾಫರ್, ಪೊಲೀಸ್ ಸಿಬ್ಬಂದಿ ಇದ್ದು ಒಟ್ಟು 82 ಮಾರ್ಗಗಳನ್ನು ರಚಿಸಲಾಗಿದೆ ಎಂದರು.
ಅಗತ್ಯ ಸೇವಾ ಮತದಾರರು; ಚುನಾವಣಾ ಸಂದರ್ಭದಲ್ಲಿ ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುವವರು ಮತದಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು 16 ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ಮತದಾನಕ್ಕೂ ಮುಂಚಿತವಾಗಿ ಸೌಲಭ್ಯ ಕೇಂದ್ರದಲ್ಲಿ ಬ್ಯಾಲೆಟ್ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. 915 ಮತದಾರರು ನೊಂದಾಯಿಸಿದ್ದು ಈ ಸಿಬ್ಬಂದಿಗಳಿಗೆ ಮೇ 1 ರಿಂದ 3 ರ ವರೆಗೆ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಅಂಚೆ ಮತದಾನ ಮಾಡಲು ಸೌಲಭ್ಯ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ಪುರುಷರಿಗಿಂತ ಮಹಿಳಾ ಮತದಾರರು ಅಧಿಕ; ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 17,09,244 ಮತದಾರರಿದ್ದಾರೆ. ಇದರಲ್ಲಿ ಪುರುಷರು 8,51,990, ಮಹಿಳೆಯರು 8,57,117 ಹಾಗೂ ತೃತೀಯ ಲಿಂಗ 137 ಮತದಾರರಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ ಪುರುಷರಿಗಿಂತ 5127 ಮಹಿಳಾ ಮತದಾರಿದ್ದಾರೆ.
ಕ್ಷೇತ್ರವಾರು ಮತದಾರರ ವಿವರ; ಜಗಳೂರು 100046 ಪುರುಷ, 98759 ಮಹಿಳಾ, 10 ಇತರೆ ಸೇರಿ 198815, ಹರಪನಹಳ್ಳಿ 112969 ಪುರುಷ, 110985 ಮಹಿಳಾ, 19 ಇತರೆ ಸೇರಿ 223973, ಹರಿಹರ 105510 ಪುರುಷ, 106870 ಮಹಿಳೆ, 17 ಇತರೆ ಒಟ್ಟು 212397, ದಾವಣಗೆರೆ ಉತ್ತರ 124485 ಪುರುಷ, 128635 ಮಹಿಳೆ, 36 ಇತರೆ ಸೇರಿ 253156, ದಕ್ಷಿಣ 109184 ಪುರುಷ, 111774 ಮಹಿಳೆ, 39 ಇತರೆ ಸೇರಿ 220997, ಮಾಯಕೊಂಡ 97759 ಪುರುಷ, 97326 ಮಹಿಳೆ, 4 ಇತರೆ ಸೇರಿ 195089, ಚನ್ನಗಿರಿ 101653 ಪುರುಷ, 102208 ಮಹಿಳೆ, 9 ಇತರೆ ಸೇರಿ 203870 ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ 100384 ಪುರುಷ, 100560 ಮಹಿಳೆ ಹಾಗೂ 3 ಇತರೆ ಸೇರಿ 200947 ಮತದಾರರಿದ್ದಾರೆ.
ಮತದಾರರ ವಿವರವನ್ನು ಅಭ್ಯರ್ಥಿಗಳಿಗೆ ನೀಡುವ ಮೂಲಕ ಮತಗಟ್ಟೆ ಮಟ್ಟದ ಏಜೆಂಟರ ಪಟ್ಟಿಯನ್ನು ನೀಡಲು ಅಭ್ಯರ್ಥಿಗಳಿಗೆ ತಿಳಿಸಿ 30 ಜನ ಅಭ್ಯರ್ಥಿಗಳಿರುವುದರಿಂದ ಮತದಾನ ದಿನ ಎರಡು ಬ್ಯಾಲೆಟ್ ಯುನಿಟ್ ಬಳಕೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಿಂದ ಬ್ಯಾಲೆಟ್ ಯುನಿಟ್‍ಗಳು ಬಂದಿದ್ದು ಒಂದೆರೆಡು ದಿನಗಳಲ್ಲಿ ಮೊದಲ ಹಂತದ ಪರಿಶೀಲನೆ ನಡೆಸಿ ರ್ಯಾಂಡಮೈಜೇಷನ್ ಮಾಡಿ ಆಯಾ ಕ್ಷೇತ್ರಗಳ ಇವಿಎಂ ಸ್ಟ್ರಾಂಗ್ ರೂಂನಲ್ಲಿ ದಾಸ್ತಾನು ಮಾಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಎ.ಆರ್.ಓ.ಗಳಾದ ದುರ್ಗಶ್ರೀ.ಎನ್, ರೇಣುಕಾ, ಭಾವನಾ ಹಾಗೂ ಕಣದಲ್ಲಿನ ಅಭ್ಯರ್ಥಿಗಳು, ಏಜೆಂಟರು ಉಪಸ್ಥಿತರಿದ್ದರು.