ಡಿ. 18 ರಂದು ಮೆಗಾ ಲೋಕ್ ಅದಾಲತ್ ಆಯೋಜನೆ – ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ

lok adalath

ದಾವಣಗೆರೆ: ಜಿಲ್ಲೆಯಲ್ಲಿ ಡಿ. 18 ರಂದು ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಲೋಕ್ ಅದಾಲತ್ ಆಯೋಜಿದಲಾಗಿದ್ದು, ಅಂದು ರಾಜಿಯಾಗಬಹುದಾದ ವಿವಿಧ ಪ್ರಕರಣಗಳ ಜೊತೆಗೆ, ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ಕೂಡ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ. 18 ರಂದು ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ ಹಾಗೂ ಜಗಳೂರು ನ್ಯಾಯಾಲಯಗಳ ಆವರಣದಲ್ಲಿ ಲೋಕ್ ಅದಾಲತ್ ನಡೆಯಲಿದ್ದು, ಸುಮಾರು 5 ಸಾವಿರ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದರು.

ಈಗಾಗಲೆ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಅರ್ಹವಾಗಿರುವ ಸುಮಾರು 1500 ಕ್ರಿಮಿನಲ್ ಪ್ರಕರಣಗಳು, ಚೆಕ್‌ಬೌನ್ಸ್ನ ಸುಮಾರು 800 ಪ್ರಕರಣಗಳು, ಪರಿಹಾರ ಹಣ ವಸೂಲಾತಿ ಕುರಿತ ಸುಮಾರು 300 ಪ್ರಕರಣಗಳನ್ನು ಗುರುತಿಸಲಾಗಿದ್ದು, ಲೋಕ್‌ಅದಾಲತ್‌ಗೆ ಇನ್ನೂ ಸಾಕಷ್ಟು ಕಾಲಾವಕಾಶ ಇರುವುದರಿಂದ, ಸುಮಾರು 5 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳನ್ನು ರಾಜಿಸಂಧಾನ ಮೂಲಕ ಇತ್ಯರ್ಥಪಡಿಸುವ ಗುರಿ ಇದೆ ಎಂದು‌ ವಿವರಿಸಿದರು.

ವಿಶೇಷವೆಂದರೆ ಬಾಕಿ ಇರುವ ಪ್ರಕರಣಗಳ ಜೊತೆಗೆ, ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಅಂದರೆ, ವ್ಯಾಜ್ಯಪೂರ್ವ ಪ್ರಕರಣಗಳನ್ನೂ ಕೂಡ ಲೋಕ್‌ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಅವಕಾಶ ಒದಗಿಸಲಾಗಿದೆ. ಇದರಿಂದಾಗಿ ಕಡಿಮೆ ಸಮಯದಲ್ಲಿ ವೆಚ್ಚ ರಹಿತವಾಗಿ ವ್ಯಾಜ್ಯಗಳು ಇತ್ಯರ್ಥಗೊಳ್ಳಲಿದ್ದು, ಸಮಾಜದಲ್ಲಿ ಉತ್ತಮ ಬಾಂಧವ್ಯ ಮೂಡಲು ಲೋಕ್‌ಅದಾಲತ್ ಸಹಕಾರಿಯಾಗಿದೆ ಎಂದರು.

ಕಳೆದ ಸೆಪ್ಟಂಬರ್ 30 ರಂದು ನಡೆಸಲಾದ ಮೆಗಾ ಲೋಕ್‌ಅದಾಲತ್‌ನಲ್ಲಿ ಜಿಲ್ಲೆಯಲ್ಲಿ ಒಟ್ಟು 2909 ಪ್ರಕರಣಗಳು ಇತ್ಯರ್ಥಗೊಂಡು, 7.67 ಕೋಟಿ ರು., ಗಳ ಪರಿಹಾರ ಒದಗಿಸಲಾಗಿದೆ ಎಂದರು ತಿಳಿಸಿದರು. ಡಿ. 18 ರಂದು ಮತ್ತೊಮ್ಮೆ ಬೃಹತ್ ಲೋಕ್ ಅದಾಲತ್ ಮೂಲಕ ಅತೀ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪ್ರಾಧಿಕಾರವು ಉದ್ದೇಶಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಮಾತನಾಡಿ, ಸಾರ್ವಜನಿಕರು ಮೆಗಾ ಲೋಕ್ ಅದಾಲತ್ ನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಹಳೆಯ ನ್ಯಾಯಾಲಯ ಸಂಕಿರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಾವಣಗೆರೆ ಇವರನ್ನು ದೂ.ಸ:08192-296364, ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ 08192-296885, ಹೊನ್ನಾಳಿ 08188-251732, ಚನ್ನಗಿರಿ 08189-229195 ಮತ್ತು ಜಗಳೂರು 08196-227600 ಇವರನ್ನು ಸಂಪರ್ಕಿಸಬಹುದು ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ಅವರು ಮಾತನಾಡಿ, ಜಿಲ್ಲೆಯಲ್ಲಿ ರಾಜಿಯಾಗಬಹುದಾದ ಸುಮಾರು 1497 ಪ್ರಕರಣಗಳನ್ನು ಗುರುತಿಸಿದ್ದು, ಅದಾಲತ್ ನಡೆಯುವ ವೇಳೆಗೆ ಇನ್ನಷ್ಟು ಪ್ರಕರಣಗಳನ್ನು ಗುರುತಿಸಿ, ಸಂಧಾನ ಮೂಲಕ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಲೋಕಿಕೆರೆ ಪ್ರದೀಪ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!