ಮೇಕೆದಾಟು ಡ್ಯಾಂ ಕಟ್ಟಲು ಕೋರ್ಟ್ ಅಡ್ಡಿ ಇದೆ ಎಂಬುದೆಲ್ಲ ಸುಳ್ಳು, ನಾವು ಪಾದಯಾತ್ರೆ ಮಾಡುತ್ತೇವೆ : ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು : ನಾವು ಒತ್ತಡ ಹೇರದಿದ್ದರೆ ಇವರು ಕೆಲಸ ಆರಂಭಿಸುವುದಿಲ್ಲ . ಮೇಕೆದಾಟು ಡ್ಯಾಂ ಕಟ್ಟಲು ಕೋರ್ಟ್ ಅಡ್ಡಿ ಇದೆ ಎಂಬುದೆಲ್ಲಾ ಸುಳ್ಳು . ಕೇಂದ್ರದಿಂದ ಒಪ್ಪಿಗೆ ಪಡೆದು ತುರ್ತಾಗಿ ಯೋಜನೆ ಆರಂಭಿಸಬೇಕು . ಇದಕ್ಕಾಗಿ ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ .
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಅವರು , ಮೇಕೆದಾಟು ಯೋಜನೆ ವಿಚಾರವಾಗಿ ಡಿಪಿಆರ್ ಮಾಡುವುದು ತಡವಾಗಿತ್ತು . ಆದರೂ ನಾವು ಡಿಪಿಆರ್ ಮಾಡಿ ಮುಗಿಸಿದ್ದೇವೆ . ಈಗ ಇವರು ಕಾಮಗಾರಿ ಆರಂಭಿಸಲು ವಿಳಂಬ ಮಾಡುತ್ತಿದ್ದಾರೆ . ಕಾಂಗ್ರೆಸ್‌ನವರು ತಡವಾಗಿ ಡಿಪಿಆರ್ ಮಾಡಿದ್ದಾರೆ ಎಂಬ ಸಿಎಂ ಹೇಳಿಕೆಯಲ್ಲಿ ಅರ್ಥವಿಲ್ಲ ಎಂದರು.
ನಾವು ಈಗ ಕಾಮಗಾರಿ ಆರಂಭಿಸಿ ಎಂದು ಕೇಳುತ್ತಿದ್ದೇವೆ . ಸರ್ಕಾರ ಯಾಕೆ ವಿಳಂಬ ಮಾಡುತ್ತಿದೆ . ಒತ್ತಡ ಏರಲೇಬೇಕಾದ ಸನ್ನಿವೇಶದಲ್ಲೇ ಇದ್ದೇವೆ , ಹಾಗಾಗಿ ಒತ್ತಡ ಹೇರಿದ್ದೇವೆ . ಸರ್ಕಾರದ ಮೇಲೆ ನಾವು ಒತ್ತಡ ಹೇರದಿದ್ದದರೆ ಇವರು ಕೆಲಸ ಆರಂಭಿಸುವುದಿಲ್ಲ . ಕೋರ್ಟ್ ಅಡ್ಡಿ ಇದೆ ಎಂಬುದೆಲ್ಲ ಸುಳ್ಳು . ಕೇಂದ್ರದಿಂದ ಒಪ್ಪಿಗೆ ಪಡೆದು ತುರ್ತಾಗಿ ಯೋಜನೆ ಆರಂಭಿಸಬೇಕು . ಇದಕ್ಕಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದರು .