ಗ್ರಾಮೀಣ ಪ್ರದೇಶದಲ್ಲಿ ಸ್ಯಾನಿಟೈಸ್ ಗೆ ಒತ್ತಾಯಿಸಿ ಸುವರ್ಣ ಕರ್ನಾಟಕ ವೇದಿಕೆ ಅಧ್ಯಕ್ಷರಿಂದ ಡಿಸಿ ಗೆ ಮನವಿ

ದಾವಣಗೆರೆ: ತಾಲೂಕಿನ ಕಾರಿಗನೂರು ಕ್ರಾಸ್(ಆಂಜನೇಯ ನಗರ) ಪ್ರದೇಶದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್.ಸಂತೋಷ ಕುಮಾರ ಮಂಗಳವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿಪತ್ರ ಸಲ್ಲಿಸಿದರು.

ಜಗತ್ತನ್ನೇ ಬಾಧಿಸುತ್ತಿರುವ ಕೊರೋನಾ ಮಹಾಮಾರಿಯು ನಗರ/ಪಟ್ಟಣ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಭಾಗದಲ್ಲೂ ವ್ಯಾಪಿಸುತ್ತಿರುವುದು ಸರಿಯಷ್ಟೆ. ದಾವಣಗೆರೆ ತಾಲೂಕು ಕುಕ್ಕುವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಿಗನೂರು ಕ್ರಾಸ್(ಆಂಜನೇಯ ನಗರ) ಪ್ರದೇಶದಲ್ಲಿ ಕಳೆದೊಂದು ವಾರದಿಂದ 6 ಕೊರೋನಾ ಪಾಸಿಟಿವ್ ಕೇಸ್ ವರದಿಯಾಗಿದ್ದು, ಈ ಪೈಕಿ ಇಬ್ಬರು ಸಾವಿಗೀಡಾಗಿದ್ದಾರೆ. ಆದರೂ ಗ್ರಾಮ ಪಂಚಾಯಿತಿ ವತಿಯಿಂದ ಸದರಿ ಪ್ರದೇಶದಲ್ಲಿ ಸ್ಯಾನಿಟೈಸೇಷನ್ ಸೇರಿದಂತೆ ಯಾವುದೇ ಮುಂಜಾಗೃತಾ ಕ್ರಮ ಕೈಗೊಂಡಿರುವುದಿಲ್ಲ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸರ್ಕಾರದ ಹೊಸ ನಿಯಮಾವಳಿಯಂತೆ ಕೊರೋನಾ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಬೇಕಿದ್ದು, ಹೋಂ ಐಸೊಲೇಷನ್‍ಗೆ ಅವಕಾಶವಿಲ್ಲ. ಆದರೂ ಕಾರಿಗನೂರು ಕ್ರಾಸ್(ಆಂಜನೇಯ ನಗರ) ಪ್ರದೇಶದಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸುವ ಕೆಲಸವಾಗಿಲ್ಲ. ಸೋಂಕಿತರ ಕುಟುಂಬದವರು ಯಾರೂ ಹೊರಗೆ ಬರದಂತೆ ಮಾತ್ರ ಕುಕ್ಕುವಾಡ ಗ್ರಾಪಂ ಪಿಡಿಓ ಹೇಳುತ್ತಿದ್ದಾರೆ. ಇದರಿಂದಾಗಿ ದೈನಂದಿನ ಅವಶ್ಯಕತೆಗಳಿಗಾಗಿ ಸೋಂಕಿತರ ಕುಟುಂಬದವರು ಪರದಾಡುವಂತಾಗಿದೆ. ಅಲ್ಲದೆ, ಸುತ್ತಮುತ್ತಲಿನ ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಅವರು ದೂರಿದರು.

ಕಾರಿಗನೂರು ಕ್ರಾಸ್(ಆಂಜನೇಯ ನಗರ) ಹಾಗೂ ಸಮೀಪದ ಹೊನ್ನಮರಡಿ ಗ್ರಾಮಗಳಲ್ಲಿ ಸುಮಾರು 400 ಮನೆಗಳಿದ್ದು, 700ಕ್ಕೂ ಅಧಿಕ ಜನಸಂಖ್ಯೆ ಇದೆ. ಇಷ್ಟು ಜನರಿಗೆ ಕೇವಲ ಒಬ್ಬ ಆಶಾ ಕಾರ್ಯಕರ್ತೆ ಇರುವುದರಿಂದ ಕೊರೋನಾ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಗ್ರಾಪಂ ಪಿಡಿಓ ಎಲ್ಲದಕ್ಕೂ ಆಶಾ ಕಾರ್ಯಕರ್ತೆಯನ್ನೇ ಹೊಣೆ ಮಾಡುತ್ತಿದ್ದು, ಸರ್ಕಾರದ ಮಾರ್ಗಸೂಚಿ ಅನುಸರಿಸುವ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ನೆಪಕ್ಕಷ್ಟೇ ಒಂದೆರೆಡು ಬಾರಿ ಸ್ಯಾನಿಟೈಸ್ ಮಾಡಿದ್ದು ಬಿಟ್ಟರೆ ಜನರ ಯಾವುದೇ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ದಯಮಾಡಿ ಜಿಲ್ಲಾಧಿಕಾರಿಗಳು ಈ ಬಗ್ಗೆ ತ್ವರಿತವಾಗಿ ಗಮನ ಹರಿಸಿ, ಸರ್ಕಾರದ ಕೊರೋನಾಮುಕ್ತ ಗ್ರಾಮಗಳ ಕನಸನ್ನು ಸಾಕಾರಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಕಾರಿಗನೂರು ಕ್ರಾಸ್(ಆಂಜನೇಯ ನಗರ) ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು. ಸದರಿ ಪ್ರದೇಶದಲ್ಲೇ ಸರ್ಕಾರಿ ಶಾಲೆ, ಹಾಸ್ಟೆಲ್ ಲಭ್ಯವಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಅಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ ಕೊರೋನಾ ಸೋಂಕಿತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕೊರೋನಾ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು. ಕಾರಿಗನೂರು ಕ್ರಾಸ್(ಆಂಜನೇಯ ನಗರ) ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೊರೋನಾ ಕುರಿತಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!