ವಾಹನ ಸವಾರರಿಗೆ ಸ್ವಾಗತಿಸುತ್ತಿದ್ದ ಕಸದ ಅಡ್ಡೆಗಳ ಸ್ವಚ್ಚಗೊಳಿಸುತ್ತಿರುವ ಮಹಾನಗರ ಪಾಲಿಕೆ! ಮುಖ್ಯ ರಸ್ತೆಯಲ್ಲಿ ಹಾಕಲಾಗಿದ್ದ ಕಸ ರವಾನೆ
ಗರುಡವಾಯ್ಸ್ ಫಲಶೃತಿ
ದಾವಣಗೆರೆ : ದಾವಣಗೆರೆ ನಗರದ ಹೊರವಲಯದಲ್ಲಿ ನಗರದ ಜನ ತಮ್ಮ ಮನೆ ಬೀಳಿಸಿ ಉಳಿದ ಮನೆಯ ತ್ಯಾಜ್ಯ ವಸ್ತುಗಳು ಸೇರಿದಂತೆ ಕಸ, ಕಡ್ಡಿ, ಬೀಳಿಸಿರುವ ಮರ ತುಂಡು, ಸಿಮೆಂಟ್ ಇಟ್ಟಿಗೆಗಳು ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಮಹಾನಗರ ಪಾಲಿಕೆಯಿಂದ ಸ್ವಚ್ಚಗೊಳಿಸಲಾಗುತ್ತಿದ್ದು, ಇನ್ಮುಂದೆ ಈ ಕಸದ ರಾಶಿಗಳು ದಾವಣಗೆರೆಗೆ ಬರುವ ಮತ್ತು ಹೋಗುವ ವಾಹನಸವಾರರಿಗೆ ಸ್ವಾಗತಿಸುವುದಿಲ್ಲ.
ಹೌದು, ದಾವಣಗೆರೆಯಿಂದ ಹದಡಿಗೆ ಹೋಗುವ ನಗರ ಹೊರವಲಯದ ರಸ್ತೆಯ ಅಕ್ಕಪಕ್ಕದಲ್ಲಿ ನಗರದ ನಾಗರೀಕರು ಹಾಕಿದ್ದ ತ್ಯಾಜ್ಯ ವಸ್ತುಗಳನ್ನು ಮಹಾನಗರ ಪಾಲಿಕೆಯಿಂದ ಸ್ವಚ್ಚಗೊಳಿಸಲಾಗುತ್ತಿದೆ. ಇದರ ಬಗ್ಗೆ ಗರುಡವಾಯ್ಸ್ ಸುಮಾರು ಬಾರಿ ಸುದ್ದಿ ಪ್ರಕಟಿಸಿತ್ತು. ಏಪ್ರಿಲ್ 3ರಿಂದ ಸ್ವಚ್ಚ ಕಾರ್ಯಕ್ಕೆ ಕೈಹಾಕಲಾಗಿದ್ದು ಇಲ್ಲಿಯವರೆಗೆ 20 ಲೋಡ್ ತ್ಯಾಜ್ಯ ವಸ್ತುಗಳನ್ನು ರವಾನಿಸಲಾಗಿದೆ. ಈ ತ್ಯಾಜ್ಯ ವಸ್ತುಗಳನ್ನು ಆವರಗೊಳ್ಳದ ಸ್ಥಳವೊಂದರಲ್ಲಿ ಹೋಗಿ ಸುರಿಯಲಾಗುತ್ತಿದೆ.ಈ ತ್ಯಾಜ್ಯ ವಸ್ತುಗಳನ್ನು ಹಸಿ ಕಸ ಮತ್ತು ಒಣ ಕಸ ಎಂದು ಬೇರ್ಪಡಿಸಿ ಮಣ್ಣು, ಧೂಳು ಇರುವ ಘಟ್ಟಿಯನ್ನು ಭಾರೀ ಗಾತ್ರದ ಲಾರಿಗಳು ಓಡಾಡುವ ದಾರಿಯಲ್ಲಿ ಹಾಕಿ, ಹಸಿ ಕಸವನ್ನು ಗೊಬ್ಬರವನ್ನಾಗಿ ಮಾಡಲಾಗುತ್ತದೆ ಎಂದು ಲಾರಿ ಚಾಲಕ ಮಂಜುನಾಥ್ ಮಾಹಿತಿ ನೀಡಿದರು.
ಇದೇ ರೀತಿ ದಾವಣಗೆರೆ ನಗರದಿಂದ ಹೊರಭಾಗಕ್ಕೆ ಹೋಗುವ ಮುಖ್ಯ ರಸ್ತೆಗಳಲ್ಲಿ ಅಂದರೆ ಹರಪನಹಳ್ಳಿ ರಸ್ತೆ, ಜಗಳೂರು ರಸ್ತೆ, ಹರಿಹರ ರಸ್ತೆಯ ಅಕ್ಕಪಕ್ಕದಲ್ಲಿಯೂ ಈ ರೀತಿಯ ಕಸವನ್ನು ನಾಗರಿಕರು ಸುರಿದಿರುವುದನ್ನು ನೋಡಬಹುದು. ಇವುಗಳೆಲ್ಲವನ್ನು ಮಹಾನಗರ ಪಾಲಿಕೆಯಿಂದ ಸ್ವಚ್ಚಗೊಳಿಸುವ ಕಾರ್ಯವಾಗಬೇಕಾಗಿದೆ.