ಸಿಡಿ ಬಿಡುಗಡೆಗೆ ತಡೆ ತಂದ ಬಗ್ಗೆ ಉತ್ತರಿಸಿದ ಸಚಿವ ಬಿ.ಸಿ. ಪಾಟೀಲ್
ಹಾವೇರಿ: ಒಮ್ಮೆ ಹೋದ ಮಾನ ಮತ್ತೆ ಬರುವುದಿಲ್ಲ. ಮೀರ್‌ಸಾಧಿಕ್ ಮತ್ತು ನಂಬಿಕೆದ್ರೋಹಿಗಳಿಂದ ರಕ್ಷಣೆ ಅಗತ್ಯವಾದ್ದರಿಂದ ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರಲಾಗಿತ್ತು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವ್ಯಾರು ವ್ಯಭಿಚಾರ ಮಾಡಿಲ್ಲ. ಆದರೆ, ನಮಗೆ ಕೆಟ್ಟ ಹೆಸರು ತರಲು ಸಿ.ಡಿ ಬಿಡುಗಡೆ ಮಾಡಹೊರಟಿದ್ದರು ಎಂದು ಸ್ಪಷ್ಟಪಡಿಸಿದರು.
ಮೀರ್ ಸಾಧಿಕ್‌ರಂಥ ಜನ ನಮ್ಮ ಸುತ್ತಮುತ್ತಲೇ ಇರುತ್ತಾರೆ. ಇದೇ ಬಣಕಾರ್ ನಮ್ಮ ಜೊತೆಗೆ ಇದ್ದು, ಈಗ ಕಾಂಗ್ರೆಸ್ ಸೇರಿದ್ದಾರೆ. ರಮೇಶ್ ಜಾರಕಿಹೊಳಿಯವರ ಬಗ್ಗೆ ಅನವಶ್ಯಕವಾಗಿ ಸಿಡಿ ಬಿಡುಗಡೆ ಮಾಡಿದರು. ಆದರೆ ಏನಾಯ್ತು? ಬಿ ರಿಪೋರ್ಟ್ ಆಯ್ತು. ನಾವು ನಮ್ಮ ಗೌರವ ರಕ್ಷಿಸಿಕೊಳ್ಳುವ ಕೆಲಸ ಮಾಡಲೇಬೇಕು. ಸ್ಟೇ ಅವಧಿ ಹಿಂದೆಯೇ ಮುಗಿದಿದೆ. ನಂತರವಾದರೂ ಸಿಡಿ ಬಿಡುಗಡೆ ಮಾಡಬಹುದಿತ್ತಲ್ಲ ಎಂದರು.
ನಾವು 17 ಮಂದಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ರಚನೆಯಾಗಿದ್ದಕ್ಕೆ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿತು. ಇದಕ್ಕಾಗಿ ಅವರು ನಮಗೆ ಅಭಿನಂದನೆ ತಿಳಿಸಬೇಕು ಎಂದು ಸಿದ್ದರಾಮಯ್ಯನವರ ಟೀಕೆಗೆ ಪ್ರತ್ಯುತ್ತರ ನೀಡಿದರು.