Minister: ಸಂವಿಧಾನ-ಸಾಹಿತ್ಯಕ್ಕೂ ಒಂದು ಅವಿನಾಭಾವ ಸಂಬಂಧ ಕಾಗಿನೆಲೆ ಶ್ರೀಗಳ ಸಾಮಾಜಿಕ ಸೇವೆ ಅನನ್ಯ: ಎಸ್.ಎಸ್.ಮಲ್ಲಿಕಾರ್ಜುನ್

IMG-20251025-WA0040

ದಾವಣಗೆರೆ : (Minister) ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳವರ ಸೇವೆ ಅನನ್ಯವಾದುದು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು, ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಬಣ್ಣಿಸಿದರು.

ಅವರಿಂದು ಬೆಂಗಳೂರು ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಶ್ರೀ ಕನಕ ಎಜುಕೇಷನ್ ಲೀಡರ್ಸ್ ಪೋರಂ ವತಿಯಿಂದ ಪ್ರತಿ ತಿಂಗಳು 4ನೇ ಶನಿವಾರದಂದು ಹಮ್ಮಿಕೊಳ್ಳುವ ತಲ್ಲಣಿಸದಿರು ಮನವೇ ಕಾರ್ಯಕ್ರಮದಡಿ ಸಾಂವಿಧಾನಿಕ ಆಶಯಗಳು ಮತ್ತು ಕನ್ನಡ ಸಾಹಿತ್ಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಪರಮಪೂಜ್ಯರು ಕೇವಲ ಧಾರ್ಮಿಕ ಚಿಂತನೆ ಅಷ್ಟೇ ಅಲ್ಲ. ಪ್ರಗತಿಪರ ಚಿಂತನೆ ಮೂಲಕ ಸಮಾಜಕ್ಕೆ ದಾರಿದೀಪವಾಗಿದ್ದಾರೆ. ನಮ್ಮ ದೇಶ ಸಂವಿಧಾನದ ಆಶಯದಂತೆ ನಡೆಯುತ್ತಿದ್ದು, ಅದನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಜನರಿಂದ, ಜನರಿಗಾಗಿ ಇರುವ ಸಂವಿಧಾನವು ರಾಜಕೀಯ ವಿಜ್ಞಾನದ ಪರಿಭಾಷೆಯಾಗಿದೆ. ಮಾನವೀಯ ಮೌಲ್ಯವು ಅಂತರ್ವಾಹಿನಿಯಾಗಿ ಹರಿದುಬಂದ ಸಾಹಿತ್ಯದಲ್ಲಿ ಸಾಂವಿಧಾನಿಕ ಆಶಯಗಳನ್ನು ಹುಡುಕುವುದು ಅಂತರಶಿಸ್ತೀಯ ಅಧ್ಯಯನಕ್ಕೆ ಪ್ರೇರೇಪಣೆ ಕೊಡುವ ಹೊಸ ಆಯಾಮವೇ ಆಗಿದೆ ಎಂದರು.

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತನ್ನು ನಾವು ಅರ್ಥೈಸಿಕೊಳ್ಳಬೇಕು. ಮೇಲ್ನೋಟಕ್ಕೆ ಸಂವಿಧಾನವು ನಿಯಮಗಳ ನುಡಿಗಟ್ಟಾದರೂ ಅದರಲ್ಲೂ ಒಂದು ಸಂವೇದನೆ ಇದೆ. ಸಂವಿಧಾನವು ಬದುಕುವ, ಮಾತನಾಡುವ ಅನೇಕ ಹಕ್ಕುಗಳನ್ನು ದಕ್ಕಿಸಿದೆ. ಹೀಗಾಗಿ, ಸಂವಿಧಾನ ಹಾಗೂ ನಮ್ಮ ಬದುಕು ಮತ್ತು ಬದುಕಿನ ಸಂವೇದನೆಯ ಸಾಹಿತ್ಯಕ್ಕೂ ಒಂದು ಅವಿನಾಭಾವ ಸಂಬಂಧವಿದೆ ಎಂದರು.

ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳವರು ಆಶೀರ್ವಚನ ನೀಡುತ್ತಾ ಭಾರತ ದೇಶದ ಸಂವಿಧಾನ ವಿಶ್ವಕ್ಕೆ ಮಾದರಿ ಆಗಿದ್ದು, ಇಂತಹ ಸಂವಿಧಾನ ಪಡೆದ ನಾವೆಲ್ಲರೂ ಧನ್ಯರು. ಈ ಸಂವಿಧಾನವನ್ನು ಕಾಪಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಸಂವಿಧಾನ ಮತ್ತು ಕನ್ನಡ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ವಿಷಯ ಮಂಡಿಸಿದರು. ಕವಿ ನಿಸಾರ್ ಅಹಮ್ಮದ್ ಹೆಚ್.ದುರ್ಗ ಆಶಯ ನುಡಿಗಳನ್ನಾಡಿದರು.

ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಬೇಬಿಮಠ ಪರಮಪೂಜ್ಯ ಜಗದ್ಗುರು ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ ಅವರು ದಿವ್ಯಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್, ನಂದಿಗಾವಿ ಶ್ರೀನಿವಾಸ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿಗಳು

error: Content is protected !!