ಅನಾಥ ಅಪ್ರಾಪ್ತ ಬಾಲಕಿಯರಿಬ್ಬರ ಜೊತೆ ವಿವಾಹ: ವಿಚಾರಣೆ ವೇಳೆ ಚಳ್ಳೆಹಣ್ಣು ತಿನ್ನಿಸಿ ಪರಾರಿ: ಇಬ್ಬರ ವಿರುದ್ದ ಪೋಕ್ಸೋ ಕಾಯ್ದೆ
ದಾವಣಗೆರೆ: ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದ ಅಪ್ರಾಪ್ತ ಬಾಲಕಿಯರಿಗೆ ಆಮಿಷವೊಡ್ಡಿ ಮದುವೆಯಾಗಿದ್ದ ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಇದೇ ತಾಲ್ಲೂಕಿನವರಾದ ಐವರು ಮಕ್ಕಳು, ಕಳೆದ ಎರಡು ವರ್ಷಗಳ ಹಿಂದೆ ತಂದೆಯನ್ನು ಮತ್ತು ಈಗಷ್ಟೆ ಐದು ತಿಂಗಳ ಹಿಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದು, ಇದರಲ್ಲಿ ನಾಲ್ವರು ಹೆಣ್ಣುಮಕ್ಕಳು ಮತ್ತು ಓರ್ವ ಬಾಲಕನಿದ್ದು ಅಜ್ಜಿಯೊಂದಿಗೆ ವಾಸಿಸುತ್ತಿದ್ದರು. ಅದೇ ಗ್ರಾಮದ ವ್ಯಕ್ತಿಯೋರ್ವ 15 ವರ್ಷದ ಬಾಲಕಿಯನ್ನು ಮದುವೆಯಾಗಿ ಮೂರು ತಿಂಗಳಾಗಿತ್ತು, ಅದೇ ಏರಿಯಾದ ಇನ್ನೊಬ್ಬ ವ್ಯಕ್ತಿ 3 ದಿನಗಳ ಹಿಂದೆ 13 ವರ್ಷದ ಬಾಲಕಿಯನ್ನು ಮದುವೆಯಾಗಿದ್ದು, ಖಚಿತ ಮಾಹಿತಿಯ ಆಧಾರದ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದೇ ವೇಳೆ 13 ವರ್ಷ ಬಾಲಕಿಯನ್ನು ಮದುವೆಯಾದವ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ವಿಚಾರಣೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಐದೂ ಮಕ್ಕಳನ್ನು ತಮ್ಮ ವಶಕ್ಕೆ ಪಡೆದ ಇಲಾಖೆ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್ ಮಕ್ಕಳನ್ನು ಜಿಲ್ಲಾ ಬಾಲಕಿಯರ ಮಂದಿರದ ಸುಪರ್ದಿಗೆ ಒಪ್ಪಿಸಿದ್ದಾರೆ.ಮದುವೆಯಾದ ಇಬ್ಬರು ವ್ಯಕ್ತಿಗಳ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿರುವುದಾಗಿ ಇಲಾಖೆಯ ಅವರು ತಿಳಿಸಿದರು.ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.