ಮೀನುಗಾರಿಕೆ ಇಲಾಖೆಯಿಂದ ಸ್ವಯಂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ : ಸಚಿವ ಎಸ್. ಅಂಗಾರ

IMG-20210918-WA0026

ದಾವಣಗೆರೆ: ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಮೀನುಗಾರಿಕೆ ವೃತ್ತಿ ಕೈಗೊಳ್ಳಲು ಉತ್ತೇಜನ ನೀಡಿ ಸ್ವಯಂ ಉದ್ಯೋಗ ಸೃಷ್ಟಿಸಲು ಹೆಚ್ಚಿನ ಒತ್ತು ನೀಡಲಾಗುವುದು. ಈ ದಿಸೆಯಲ್ಲಿ ರಾಜ್ಯದಲ್ಲಿನ ಮೀನುಮರಿ ಉತ್ಪಾದನಾ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಯೋಜಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಹೇಳಿದರು.

ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಮೀನುಮರಿ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಧಾನ ಮಂತ್ರಿಯವರ ಆಶಯದಂತೆ ಆತ್ಮ ನಿರ್ಭರ್ ಭಾರತ್ ನಿರ್ಮಾಣಕ್ಕೆ ಮೀನುಗಾರಿಕೆ ಇಲಾಖೆಯು ಕೈ ಜೋಡಿಸಿದ್ದು, ಕರಾವಳಿ ಹಾಗೂ ಒಳನಾಡು ಮೀನುಗಾರಿಕೆಯಲ್ಲಿ ಹೆಚ್ಚಿನ ಜನರು ತೊಡಗಿಸಿಕೊಳ್ಳಲು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದೆ. ಮೀನುಗಾರಿಕೆಯಲ್ಲಿ ಜನರು ಸ್ವಉದ್ಯೋಗ ಕೈಗೊಂಡು ಆರ್ಥಿಕ ಸ್ವಾವಲಂಬನೆ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.

ರಾಜ್ಯದಲ್ಲಿ ಮೀನುಮರಿ ಉತ್ಪಾದನಾ ಕೇಂದ್ರಗಳ ಕೊರತೆಯ ಕಾರಣದಿಂದಾಗಿ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಂದ ಮೀನುಮರಿ ತರುವ ಪರಿಸ್ಥಿತಿ ಇದೆ. ಇನ್ನು ಮುಂದೆ ಮೀನುಗಾರಿಕೆ ಇಲಾಖೆಯಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವ ಬದಲಾಗಿ, ಮೀನುಮರಿ ಉತ್ಪಾದನಾ ಕೇಂದ್ರಗಳ ಅಭಿವೃದ್ಧಿ ಕೈಗೊಂಡು, ನಾವೇ ಮೀನುಮರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಮೂಲಕ ಮೀನುಗಾರಿಕೆ ಕೈಗೊಳ್ಳುವ ಕಾರ್ಮಿಕರಿಗೆ ಸ್ವಯಂ ಉದ್ಯೋಗ ನಡೆಸಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಒಳನಾಡು ಮೀನುಗಾರಿಕೆ ನಡೆಸುವವರಿಗೆ ಸಹಾಯಧನ ನೀಡುವ ಯೋಜನೆಯ ನಿಯಮಗಳನ್ನು ಬದಲಾಯಿಸಲು ಉದ್ದೇಶಿಸಲಾಗಿದ್ದು, ಪ್ರಸ್ತುತ 01 ಹೆಕ್ಟೇರ್‌ನಲ್ಲಿ ಮೀನುಗಾರಿಕೆ ಕೈಗೊಳ್ಳುವವರಿಗೆ ಸಹಾಯಧನ ನೀಡಲಾಗುತ್ತಿದ್ದು, ಇದರಿಂದ ಸಣ್ಣ ಪ್ರಮಾಣದಲ್ಲಿ ಮೀನುಗಾರಿಕೆ ಮಾಡುವವರಿಗೆ ಸಹಾಯಧನ ನೀಡಲು ತೊಂದರೆ ಇದೆ. ಹೀಗಾಗಿ ಶೀಘ್ರದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ಕುರಿತು ನಿಯಮಗಳ ಬದಲಾವಣೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಮೀನುಗಾರಿಕೆ ಇಲಾಖೆ ಶಿವಮೊಗ್ಗದ ಜಂಟಿನಿರ್ದೇಶಕ ಉಮೇಶ್, ದಾವಣಗೆರೆ ಉಪನಿರ್ದೇಶಕ ಗಣೇಶ್, ಚನ್ನಗಿರಿ ಸಹಾಯಕ ನಿರ್ದೇಶಕಿ ದೀಪಶ್ರೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!