ದಾವಿವಿಯಲ್ಲಿ ಹಣ ದುರುಪಯೋಗ: ತನಿಖಾ ತಂಡ ಭೇಟಿ

ದಾವಣಗೆರೆ: ತನಿಖಾ ಸಮಿತಿಯು ಸೋಮವಾರ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದು, ವಿವಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ, ಹಣ ದುರುಪಯೋಗ ಆರೋಪ ಸಂಬಂಧ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿದೆ.
ಸಮಿತಿಯ ಅಧ್ಯಕ್ಷೆ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಸ್ನೇಹಲ್ ಸುಧಾಕರ ಲೋಖಂಡೆ ಮತ್ತು ಸದಸ್ಯೆ ಮೈಸೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ. ಸಂಗೀತಾ ಗಜಾನನ ಭಟ್ ಅವರು ಇಡೀ ದಿವಸ ವಿಶ್ವವಿದ್ಯಾಲಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ ದೂರು ನೀಡಿದ್ದ ಅಂದಿನ ಸಿಂಡಿಕೇಟ್ ಸದಸ್ಯರಿಂದಲೂ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಉನ್ನತ ಶಿಕ್ಷಣ ಮತ್ತು ಹಣಕಾಸು ಇಲಾಖೆಯ ಒಪ್ಪಿಗೆ ಇಲ್ಲದೆ ಇಬ್ಬರು ಗುತ್ತಿಗೆ ನೌಕರರನ್ನು ಕಾಯಂ ಮಾಡಲಾಗಿತ್ತು ಎಂಬುದು ಒಂದು ಆರೋಪವಾದರೆ, ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸದೆ 10 ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆ ಹೊರಡಿಸಲಾಗಿತ್ತು ಎಂಬುದು ಮತ್ತೊಂದು ಆರೋಪ.
ಕುಲಪತಿಗಳ ಶೋಧನಾ ಸಮಿತಿಯ ಒಂದು ದಿನದ ಸಭೆಗಾಗಿ 8.6 ಲಕ್ಷ ರೂ. ಹೆಚ್ಚುವರಿ ಖರ್ಚನ್ನು ಮಾಡಲಾಗಿತ್ತು. ಈ ವಿಚಾರವನ್ನು ಸಿಂಡಿಕೇಟ್‌ನ ಗಮನಕ್ಕೆ ತಂದಿರಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿತ್ತು. ಸಿಂಡಿಕೇಟ್‌ನ ಒಪ್ಪಿಗೆ ಪಡೆಯದೆ ನ್ಯಾಕ್ ಮತ್ತು ಘಟಿಕೋತ್ಸವ ಸಂಬಂಧ ಅಂದಾಜು 2 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇದೆಲ್ಲದರ ಕುರಿತು ಸಮಿತಿಯ ಸದಸ್ಯರು ಮಾಹಿತಿ ಪಡೆದಿದ್ದು, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

 
                         
                       
                       
                       
                       
                       
                       
                      