ನಿರ್ಮಿತಿ ಕೇಂದ್ರದ ಮೂಡಲಗಿರಿಯಪ್ಪ, ಸತೀಶ್ ಕಲ್ಲಟ್ಟಿ ಅಮಾನತು
ದಾವಣಗೆರೆ: ಚಿತ್ರದುರ್ಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ ಹಾಗೂ ಯೋಜನಾ ಅಭಿಯಂತರ ಸತೀಶ್ ಕಲ್ಲಟ್ಟಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಡಿ.ಎಂ.ಎಫ್ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ 12 ಲಕ್ಷ ರೂ. ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ ಪೂರ್ಣಗೊಳಿಸದೆ ಕಾಮಗಾರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.
ನಿರ್ಮಿತಿ ಕೇಂದ್ರದ ಸಹಾಯಕ ಯೋಜನಾ ವ್ಯವಸ್ಥಾಪಕ ಎಂ.ಜೆ. ಮಲ್ಲಿಕಾರ್ಜುನ್ ಅವರು ಮೂಡಲಗಿರಿಯಪ್ಪ ಅವರು ನಿರ್ಮಿತಿ ಕೇದ್ರದಲ್ಲಿ ನಡೆಸಿದ ಅವ್ಯವಹಾರ ನಡೆಸಿದ್ದು, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕಾಗಿ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಸಂಬಂಧ ಯೋಜನಾ ನಿರ್ದೇಶಕು, ಜಿಲ್ಲಾ ಸನಗರಾಭಿವೃದ್ಧಿ ಕೋಶ ಹಾಗೂ ಉಪ ವಿಭಾಗಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು ಜಂಟಿಯಾಗಿ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ತಿಳಿಸಲಾಗಿತ್ತು.
ಸ್ಥಳ ಪರಿಶೀಲನೆ ನಡೆಸಿ ವರದಿ ಕೊಟ್ಟ ನಂತರ ಅಕ್ರಮ ನಡೆಸಿರುವುದು ಸಾಬೀತಾದ ಕಾರಣ ಚಿತ್ರದುರ್ಗ ಗಣಿ ಇಲಾಖೆ ಅಧಿಕಾರಿಗಳು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಿಮಿನಲ್ ಪ್ರಕರಣದಡಿ ಎಫ್ ಐ ಆರ್ ದಾಖಲಾಗಿತ್ತು. ಇದರ ಅನ್ವಯ ಜಿಲ್ಲಾಧಿಕಾರಿ ಹಾಗೂ ನಿರ್ಮಿತಿ ಕೇಂದ್ರದ ಅಧ್ಯಕ್ಷರು ಇವರಿಬ್ಬರೂ ತನಿಖೆಗೆ ಅಡ್ಡಿ ಪಡಿಸುವ, ಸಂಭವನೀಯ ಕಾರಣಗಳಿಂದ ವಜಾ ಮಾಡಿ ಅದೇಶಿಸಿದ್ದಾರೆ.
ವರದಿಯ ಅಂಶಗಳನ್ನು ಪರಿಶೀಲಿಸಲಾಗಿ ಮೂಡಲಗಿರಿಯಪ್ಪ ಕೆ.ಜಿ. ಹಾಗೂ ಸತೀಶ್ ಕಲ್ಪಟ್ಟಿ ವಿರುದ್ಧ ಕ್ರಮಿನಲ್ ಮೊಕದ್ದಮೆ ದಾಖಲಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಅವರನ್ನು ಕೂಡಲೇ ಸೇವೆಯಿಂದ ವಿಮುಕ್ತಿಗೊಳಿಸಿ ಆದೇಶಿಸಲಾಗಿದೆ.
ಚಿತ್ರದುರ್ಗ ನಿರ್ಮಿತಿ ಕೇಂದ್ರದ ಮೂಡಲಗಿರಿಯಪ್ಪ ವಿರುದ್ದ ಹಲವಾರು ದೂರುಗಳಿದ್ದು ಪ್ರಕರಣಗಳು ತನಿಖೆಯ ಹಂತದಲ್ಲಿದೆ ಎಂದು ಹೇಳಲಾಗಿದೆ.