ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಪಡೆಯಲು ಸದಾವಕಾಶ ಸ್ಮಾರ್ಟ್‍ಸಿಟಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿದ್ವತ್ ಲರ್ನಿಂಗ್ ಆ್ಯಪ್ ಮೂಲಕ ಉಚಿತ ಶಿಕ್ಷಣ
ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮೈಸೂರಿನ ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್ ಪ್ರೈಲಿ. ಇವರ ಪ್ರಾಯೋಜಕತ್ವದಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮಕ್ಕಳ ಪರೀಕ್ಷಾ ಹಿತದೃಷ್ಟಿಯಿಂದ 08, 09 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ 02 ತಿಂಗಳುಗಳ ಕಾಲ ವಿದ್ವತ್ ಲರ್ನಿಂಗ್ ಆ್ಯಪ್‍ನ ಉಚಿತ ಸಬ್‍ಸ್ಕ್ರಿಪ್ಷನ್ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದ್ದು, ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ಈ ಆ್ಯಪ್ ಅನ್ನು ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಸ್ಮಾರ್ಟ್‍ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರು ತಿಳಿಸಿದ್ದಾರೆ.
ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿದ್ವತ್ ಲರ್ನಿಂಗ್ ಆ್ಯಪ್ ಉಚಿತವಾಗಿ ಒದಗಿಸುವ ಕುರಿತಂತೆ ಜಿಲ್ಲಾಡಳಿತ ಭವನ ಆವರಣದಲ್ಲಿರುವ ಸ್ಮಾಟ್‍ಸಿಟಿ ಯೋಜನಾ ಕಚೇರಿಯಲ್ಲಿ ಬುಧವಾರ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.
ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಕಾರಣದಿಂದಾಗಿ ಕಳೆದೆರಡು ವರ್ಷಗಳಲ್ಲಿ ಮಕ್ಕಳು ಶಾಲೆಗಳಿಗೆ ಭೌತಿಕವಾಗಿ ಹಾಜರಾಗದೆ, ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ. ಆನ್‍ಲೈನ್ ತರಗತಿಗಳನ್ನು ಅನಿವಾರ್ಯವಾಗಿ ಕೈಗೊಳ್ಳಲಾಗಿತ್ತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಮೈಸೂರಿನ ವಿದ್ವತ್ ಇನೋವೇಟಿವ್ ಸಲ್ಯೂಷನ್ಸ್ ಪ್ರೈ.ಲಿ. ಕಂಪನಿಯು ದಾವಣಗೆರೆಯಲ್ಲಿ 05 ರಿಂದ 10 ನೇ ತರಗತಿ ಮತ್ತು ಕಾಲೇಜುಗಳಲ್ಲಿ ಪದವಿಪೂರ್ವ ಹಾಗೂ ಪದವಿ ಕಾಲೇಜುವರೆಗಿನ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಪಠ್ಯಗಳನ್ನು ಒಳಗೊಂಡಂತೆ ಸ್ಮಾರ್ಟ್‍ಕ್ಲಾಸ್‍ಗಳಿಗೆ ಕಂಟೆಂಟ್‍ಗಳನ್ನು ಒದಗಿಸಿಕೊಟ್ಟಿದೆ.
ಕಳೆದ ವರ್ಷ ಸುಮಾರು 6900 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು, ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಪ್ರಯತ್ನದ ಕಾರಣದಿಂದ ಪ್ರಸಕ್ತ ವರ್ಷವೂ ಕೂಡ ವಿದ್ವತ್ ಇನೋವೇಟಿವ್ ಸಲ್ಯೂಷನ್ಸ್ ಪ್ರೈ.ಲಿ. ಕಂಪನಿಯು ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮಕ್ಕಳ ಪರೀಕ್ಷಾ ಹಿತದೃಷ್ಟಿಯಿಂದ 08, 09 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ 02 ತಿಂಗಳುಗಳ ಕಾಲ ವಿದ್ವತ್ ಲರ್ನಿಂಗ್ ಆ್ಯಪ್‍ನ ಉಚಿತ ಸಬ್‍ಸ್ಕ್ರಿಪ್ಷನ್ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು, ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಆ್ಯಪ್ ಅನ್ನು ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಇದರ ಅನುಕೂಲ ಪಡೆದುಕೊಳ್ಳಬೇಕು.
ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ತರಗತಿಗಳನ್ನು ಮೂರು ಹಂತಗಳಲ್ಲಿ ಹಾಗೂ ಕಾಲೇಜಿನಲ್ಲಿ ಮೊದಲ ಹಂತದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಶಾಲೆಗಳಿಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ 03 ಕೋಟಿ ರೂ. ವೆಚ್ಚದಲ್ಲಿ 19 ಶಾಲೆಗಳಲ್ಲಿ 62 ಸ್ಮಾರ್ಟ್ ತರಗತಿಗಳು ಮತ್ತು 19 ಸ್ಮಾರ್ಟ್ ಲ್ಯಾಬ್‍ಗಳು. ಎರಡನೆ ಹಂತದಲ್ಲಿ 1.70 ಕೋಟಿ ರೂ. ವೆಚ್ಚದಲ್ಲಿ 10 ಶಾಲೆಗಳ 40 ತರಗತಿಗಳಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು 01 ಸರ್ಕಾರಿ ಐಟಿಐ ಕಾಲೇಜು ಸೇರಿದಂತೆ ಒಟ್ಟು 11 ಸ್ಮಾರ್ಟ್ ಲ್ಯಾಬ್‍ಗಳು. ಮೂರನೆ ಹಂತದಲ್ಲಿ 31 ಶಾಲೆಗಳ 56 ತರಗತಿಗಳಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಿಸಿದ್ದು, 31 ಕಂಪ್ಯೂಟರ್ ಲ್ಯಾಬ್ ನಿರ್ಮಿಸಲಾಗಿದೆ. 09 ಕಾಲೇಜುಗಳಲ್ಲಿ 36 ಸಾರ್ಟ್ ತರಗತಿ, 18 ಕಂಪ್ಯೂಟರ್ ಲ್ಯಾಬ್ ನಿರ್ಮಿಸಲಾಗಿದೆ. ಮೈಸೂರಿನ ವಿದ್ವತ್ ಇನೋವೇಟಿವ್ ಸಲ್ಯೂಷನ್ಸ್ ಪ್ರೈ.ಲಿ. ಇವರು ಎರಡನೆ ಮತ್ತು ಮೂರನೆ ಹಂತದ ಕಾಮಗಾರಿಗಳ ಗುತ್ತಿಗೆದಾರರಾಗಿದ್ದು, ಈ ಕಾಮಗಾರಿಗಳು ಲೋಕಾರ್ಪಣೆಗೊಂಡು ನಗರದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿವೆ ಎಂದರು.
ಮೈಸೂರಿನ ವಿದ್ವತ್ ಇನೋವೇಟಿವ್ ಸಲ್ಯೂಷನ್ಸ್ ಪ್ರೈ.ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರೋಹಿತ್ ಎಂ. ಪಾಟೀಲ್ ಅವರು ಮಾತನಾಡಿ, ತಮ್ಮ ಕಂಪನಿಯು ತನ್ನ ಸಿಎಸ್‍ಆರ್ ನಿಧಿಯಡಿ, ದಾವಣಗೆರೆ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ನೆರವು ನೀಡುವ ಉದ್ದೇಶದಿಂದ ವಿದ್ವತ್ ಎಜುಕೇಷನಲ್ ಮೊಬೈಲ್ ಆ್ಯಪ್ ಮೂಲಕ ಡಿಜಿಟಲ್ ಶಿಕ್ಷಣ ಒದಗಿಸಲು ಮುಂದಾಗಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಡಿಜಿಟಲ್ ಶಿಕ್ಷಣ ಒದಗಿಸುವುದು ತನ್ನ ಮುಖ್ಯ ಧ್ಯೇಯವಾಗಿದ್ದು, ಈ ಆ್ಯಪ್ ಬಳಸಿ ವ್ಯಾಸಂಗ ಮಾಡಿರುವ ಅನೇಕ ವಿದ್ಯಾರ್ಥಿಗಳು ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625 ಕ್ಕೆ 600 ಕ್ಕಿಂತ ಹೆಚ್ಚಿನ ಅಂಕ ಗಳಿಸಿ ಪಾಸಾಗಿದ್ದಾರೆ. ಕಳೆದ ವರ್ಷ ದಾವಣಗೆರೆ ಜಿಲ್ಲೆಯ 6900 ಕ್ಕೂ ವಿದ್ಯಾರ್ಥಿಗಳು ಆ್ಯಪ್ ಬಳಸಿದ್ದು, ಇದರಲ್ಲಿ ಹಲವಾರು ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ದಾವಣಗೆರೆಯಲ್ಲಿ ಸ್ಮಾರ್ಟ್ ಕ್ಲಾಸ್‍ಗಳ ಮೂಲಕ ತರಗತಿವಾರು ವಿಷಯ ಪಠ್ಯಗಳಿಗೆ ಎಲ್ಲ ರೀತಿಯ ಪರಿಕಲ್ಪನೆಗಳನ್ನು ದೃಶ್ಯ ಮಾಧ್ಯಮ ಹಾಗೂ ಅನಿಮೇಷನ್‍ಗಳ ಮೂಲಕ ವಿವರಿಸಲಾಗಿದೆ. ಇದರ ಜೊತೆಗೆ ಪಠ್ಯ ಪುಸ್ತಕದ ಅಭ್ಯಾಸ ಪ್ರಶ್ನೋತ್ತರಗಳನ್ನು ನೀಡಿದ್ದು, ಕಲೆಕೆಗೆ ಸಹಾಯವಾಗುವಂತೆ ಪ್ರಶ್ನೆಕೋಠಿ, ಅಭ್ಯಾಸ ಪುಸ್ತಕಗಳು, ಪರಿಕಲ್ಪನಾ ನಕ್ಷೆ, ಪಾಠ ಯೋಜನೆ, ಮಾದರಿ ಪ್ರಶ್ನೆಪತ್ರಿಕೆಗಳನ್ನೂ ಸಹ ನೀಡಲಾಗಿದ್ದು, ಈ ಕಲಿಕಾ ಸೌಲಭ್ಯವು ಕೇವಲ ಸ್ಮಾರ್ಟ್ ಶಾಲೆಗಳಿಗೆ ಮಾತ್ರ ಸೀಮಿತವಾಗಿರದೆ, ವಿದ್ವತ್ ಲರ್ನಿಂಗ್ ಆ್ಯಪ್‍ನಲ್ಲಿ ಕೂಡ ನೀಡಲಾಗಿದೆ. ವಿದ್ವತ್ ಆ್ಯಪ್‍ನಲ್ಲಿ 8 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲೀಷ್, ಉರ್ದು ಮಾಧ್ಯಮದಲ್ಲಿ ಪಠ್ಯಗಳು ಸಿಬಿಎಸ್‍ಸಿ ಹಾಗೂ ಸ್ಟೇಟ್ ಸಿಲಬಸ್‍ನವರಿಗೂ ಲಭ್ಯವಿದೆ. ಈ ಪರಿಕಲ್ಪಾಧಾರಿತ ಕಲಿಕೆಯು ಮಗುವಿನ ಬೌದ್ಧಿಕ ಸಾಮಥ್ರ್ಯ ಹೆಚ್ಚಿಸುವುದಲ್ಲದೆ, ಕಲಿಕೆಯ ಆಸಕ್ತಿ ಉಂಟುಮಾಉವುದರಲ್ಲಿ ಸಹಾಯಕವಾಗಿದೆ. ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಸಂವಾದನಾತ್ಮಕ ಕಲಿಕಾ ಮನೋಭಾವ ಹೆಚ್ಚಿಸಿ, ತಮ್ಮನ್ನು ತಾವು ಕಲಿಕೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತೆ ರೇರೇಪಿಸುತತದೆ. ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯಬೇಕಾದ ಎಲ್ಲ ಬಗೆಯ ಪಠ್ಯ ವಿಷಯಗಳನ್ನು ವಿದ್ವತ್ ಆ್ಯಪ್ ಮೂಲಕವೇ ಮನೆಯಲ್ಲಿಯೇ ಸುರಕ್ಷಿತವಾಗಿ ಅಭ್ಯಾಸಿಸಬಹುದಾಗಿದೆ ಎಂದರು.
ವಿದ್ವತ್ ಲರ್ನಿಂಗ್ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರ ವೆಬ್‍ಲಿಂಕ್ ಮೊಬೈಲ್‍ಗಾಗಿ https://play.google.com/store/apps/details?id=com.visl ನಿಂದ ಪಡೆಯಬಹುದಾಗಿದೆ.