ಯಶಸ್ವಿನಿ ಯೋಜನೆಯಡಿ ಜನವರಿ ಒಂದೇ ತಿಂಗಳಲ್ಲೇ 1 ಸಾವಿರಕ್ಕೂ ಅಧಿಕ ಸದಸ್ಯರಿಗೆ ಚಿಕಿತ್ಸೆ.

More than 1,000 members were treated in a single month of January under Yashavini Yojana.

ಯಶಸ್ವಿನಿ ಯೋಜನೆ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯಶಸ್ವಿನಿ ಯೋಜನೆ ಮರುಜಾರಿಯಿಂದ ಜನವರಿ ಒಂದೇ ತಿಂಗಳಲ್ಲೇ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಸದಸ್ಯರು ಗುಣಮಟ್ಟದ ಆರೋಗ್ಯ ಸೇವೆ ಪಡೆದುಕೊಂಡಿದ್ದು ಈ ಯೋಜನೆಗೆ ಅಭೂತಪೂರ್ವ ಸ್ಪಂದನೆ ದೊರೆತಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಯಶಸ್ವಿನಿ ಯೋಜನೆ ಕುರಿತು ಮಾತನಾಡಿದ ಸಚಿವರು, ಜನವರಿ ಅಂತ್ಯದವರೆಗೆ 30 ಲಕ್ಷ ಸದಸ್ಯರ ಗುರಿಗೆ ಎದುರಾಗಿ 33.10 ಲಕ್ಷ ಸದಸ್ಯರನ್ನು ನೋಂದಾಯಿಸಿ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸದಸ್ಯರ ನೋಂದಣಿ ಕಾರ್ಯ ಮುಂದುವರೆಯುತ್ತಿರುವ ಜೊತೆಗೆ 27 ಜಿಲ್ಲೆಗಳಲ್ಲಿನ 127 ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಜನವರಿ ಒಂದೇ ತಿಂಗಳಲ್ಲಿ 1000ಕ್ಕೂ ಹೆಚ್ಚು ಫಲಾನುಭವಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದವರು ತಿಳಿಸಿದ್ದಾರೆ.
ಯಶಸ್ವಿನಿ ಯೋಜನೆಯಡಿ ಇದುವರೆಗೂ ರಾಜ್ಯಾದ್ಯಂತ ಪ್ರತಿಷ್ಠಿತ ಮೆಡಿಕಲ್ ಕಾಲೇಜು ಆಸ್ಪತ್ರೆಗಳು, ಸರ್ಕಾರಿ ಜಿಲ್ಲಾ ಆಸ್ಪತ್ರೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಸೇರಿದಂತೆ 474 ನೆಟ್ವರ್ಕ್ ಆಸ್ಪತ್ರೆಗಳು ಟ್ರಸ್ಟ್ ನಲ್ಲಿ ನೋಂದಾಯಿಸಿಕೊಂಡಿವೆ.
ಜನವರಿ 1ರಿಂದಲೇ ಫಲಾನುಭವಿಗಳಿಗೆ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೃದಯ ಸಂಬಂಧಿ ಕಾಯಿಲೆ, ಕಿವಿ, ಮೂಗು, ಗಂಟಲು ವ್ಯಾದಿಗಳು, ನರ, ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಇತ್ಯಾದಿ ರೋಗಗಳಿಗೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಸದಸ್ಯರು ಯೂನಿಕ್ ಐಡಿ ಸಂಖ್ಯೆಯುಳ್ಳ ಪ್ಲಾಸ್ಟಿಕ್ ಕಾರ್ಡ್ ಹಾಜರುಪಡಿಸಿ 1650 ಚಿಕಿತ್ಸೆಗಳನ್ನು ನಗದುರಹಿತವಾಗಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿಕಿತ್ಸೆ ದರಗಳನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಹಿಂದಿನ ಯಶಸ್ವಿನಿ ಯೋಜನೆಯಡಿ ಚಿಕಿತ್ಸೆ ದರ ಹೆಚ್ಚಿದ್ದಲ್ಲಿ ಆ ದರವನ್ನು ಅಥವಾ ಪ್ರಸ್ತುತ ಯೋಜನೆಗೆ ಪರಿಗಣಿಸಿರುವ ಆಯುಷ್ಮಾನ ಭಾರತ ಚಿಕಿತ್ಸೆ ದರಗಳು ಹೆಚ್ಚಿದ್ದಲ್ಲಿ ಅವುಗಳನ್ನು ಪರಿಗಣಿಸಲು ಆದೇಶವಾಗಿರುತ್ತದೆ. ಅಂದರೆ ಯಾವ ಯೋಜನೆಯಲ್ಲಿ ಹೆಚ್ಚಿನ ದರ ಇರುತ್ತದೆಯೋ ಆ ದರವನ್ನು ಪರಿಗಣಿಸಿ ಆಸ್ಪತ್ರೆಗಳ ಬಿಲ್ ಗಳನ್ನು ಪಾವತಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ನೆಟ್ ವರ್ಕ್ ಆಸ್ಪತ್ರೆಗಳು ಬಿಲ್ಲುಗಳು ಸಲ್ಲಿಸಿದ ಒಂದು ತಿಂಗಳೊಳಗೆ ಅವುಗಳನ್ನು ಪಾವತಿಸಲು ವ್ಯವಸ್ಥೆ ಮಾಡಲಾಗಿದೆ. ಮೊದಲನೇ ಕಂತಿನ ಬಿಲ್ ಅನ್ನು ಫೆಬ್ರವರಿ 15ರೊಳಗೆ ಪಾವತಿ ಮಾಡಲು ಉದ್ದೇಶಿಸಲಾಗಿದೆ. ತದನಂತರ ಮುಂದಿನ ಬಿಲ್ ಗಳನ್ನು ಪ್ರತಿ ತಿಂಗಳು ಪಾವತಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದಾರೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!